ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಅಭ್ಯರ್ಥಿಗಳ ಮತ್ತು ಅಧಿಕಾರಿಗಳ ನಡುವೆ ಏಜೆಂಟ್ ಆಗಿದ್ದ ಸೇವಾನಿರತ (ಇನ್ಸರ್ವಿಸ್) ಪೊಲೀಸರಿಗೆ ಬಂಧನ ಭೀತಿ ಶುರುವಾಗಿದೆ. ಮಾಹಿತಿ ನೀಡದೆ ವಾರಗಟ್ಟಲೇ ಕರ್ತವ್ಯಕ್ಕೆ ಗೈರಾಗುತ್ತಿದ್ದು, ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. 545 ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್ಡಿಎ ಹರ್ಷ, ಸಶಸ ಮೀಸಲು ಪಡೆ ಎಸ್ಐ ಲೋಕೇಶ್, ಹೆಡ್ ಕಾನ್ಸ್ಟೇಬಲ್ ಲೋಕೇಶ್, ಎಸ್ಡಿಎ ಶ್ರೀಧರ್ ಎಂಬುವರನ್ನು ಬಂಧಿಸಿದ್ದಾರೆ.
ಇದಲ್ಲದೆ, ಆರೋಪಿಗಳನ್ನು ಕಸ್ಟಡಿಗೆ ಪಡೆದು ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಐಡಿ ಅಧಿಕಾರಿಗಳು ಇವರ ಲಾನುಭವಿಗಳು ಮತ್ತು ಸಂಪರ್ಕದಲ್ಲಿ ಇರುವ ದಲ್ಲಾಳಿಗಳು, ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಪತ್ತೆಗೆ ಬಲೆಬೀಸಿದ್ದಾರೆ. ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಕಿಂಗ್ಪಿನ್ಗಳ ನಡುವೆ ದಲ್ಲಾಳಿ ಕೆಲಸ ಮಾಡಿಕೊಂಡು ಕೆಲ ಸೇವಾನಿರತ ಅಧಿಕಾರಿ, ಸಿಬ್ಬಂದಿ ಕಮಿಷನ್ ಪಡೆದಿದ್ದಾರೆ. ಇದೀಗ ಅಧಿಕಾರಿಗಳೇ ಸಿಐಡಿ ಬಲೆಗೆ ಸಿಕ್ಕಿಬಿದ್ದಿರುವ ಕಾರಣ, ಯಾರ ಕಡೆಯಿಂದ ಸಂಪರ್ಕ ಲಭ್ಯವಾಗಿದೆ ಎಂಬುದು ಬಾಯ್ಬಿಟ್ಟರೆ ತಾವೂ ಬಂಧನಕ್ಕೆ ಒಳಗಾಗುತ್ತೇವೆ ಎಂಬ ಕಾರಣಕ್ಕೆ ಕಚೇರಿಯತ್ತ ಮುಖ ಮಾಡುತ್ತಿಲ್ಲ. ಪಶ್ಚಿಮ ವಿಭಾಗದ ಠಾಣೆಯೊಂದರಲ್ಲಿ ಇಬ್ಬರು ಸಬ್ಇನ್ಸ್ಪೆಕ್ಟರ್ಗಳು ಏಕಾಏಕಿ ಕರ್ತವ್ಯದಿಂದ ದೂರ ಉಳಿದಿದ್ದಾರೆ. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೂ ಬಂದಿಲ್ಲ. ಸಹೋದ್ಯೋಗಿಗಳ ಸಂಪರ್ಕಕ್ಕೂ ಸಿಗುತ್ತಿಲ್ಲ. ಮತ್ತೊಂದೆಡೆ, ಗೈರಾಗುತ್ತಿರುವ ಪೊಲೀಸರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಗೊಂದಲ ಸೃಷ್ಟಿಯಾಗಿದೆ.
ಎಸ್ಐ ನೇಮಕಾತಿ ಅಕ್ರಮದಲ್ಲಿ ಇವರ ಕೈವಾಡ ಇರುವ ಬಗ್ಗೆ ಸ್ನೇಹಿತರ ಬಳಗದಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿವೆ. ಅಡ್ಡದಾರಿಯಲ್ಲಿ ಬಂದವರಿಂದಲೇ ಡೀಲ್: ಇಲಾಖೆಗೆ ವಾಮಮಾರ್ಗದಲ್ಲಿ ಸೇರ್ಪಡೆಯಾಗಿರುವ ಕಾನ್ಸ್ಟೇಬಲ್ ಮತ್ತು ಎಸ್ಐಗಳು ಅಕ್ರಮದಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ. ನೇಮಕಾತಿ ವೇಳೆ ತಮಗೆ ಸಹಾಯ ಮಾಡಿದ್ದ ಅಧಿಕಾರಿಗಳನ್ನೇ ಸಂಪರ್ಕ ಮಾಡಿ ದಲ್ಲಾಳಿ ಕೆಲಸ ಮಾಡಿದ್ದಾರೆ. 5ರಿಂದ 10 ಲಕ್ಷ ರೂ. ಕಮಿಷನ್ ಪಡೆದು ನೌಕರಿ ಕೊಡಿಸಿರುವ ಆರೋಪ ಕೇಳಿ ಬಂದಿವೆ. ಅಕ್ರಮದಲ್ಲಿ ತೊಡಗಿರುವ ಸೇವಾನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿ ನೇಮಕಾತಿ ದಾಖಲೆ ಪರಿಶೀಲನೆ ನಡೆಸಿದರೆ ವಾಮಮಾರ್ಗದಲ್ಲಿಯೇ ಇಲಾಖೆಗೆ ಸೇರಿರುವ ಬಗ್ಗೆ ಸ್ಫೋಟಕ ಮಾಹಿತಿ ಹೊರಬರಬಹುದು. ಇದರಿಂದ ಅಕ್ರಮವನ್ನು ಶಾಶ್ವತವಾಗಿ ತೊಲಗಿಸಲು ಸಾಧ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಲ್ಎ ಆಗುವ ಬಯಕೆ
ಕಲಬುರಗಿ: ಪಿಎಸ್ಐ ನೇಮಕ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆರ್.ಡಿ. ಪಾಟೀಲ್ ಅಲಿಯಾಸ್ ರುದ್ರಗೌಡ ಜೈಲಿಗೆ ಹೋದ ಕೆಲ ದಿನಗಳಲ್ಲೇ ಹೊರಬರುವುದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿಸುವಂತೆ ಬೆಂಬಲಿಗರಿಗೆ ಫರ್ಮಾನು ಹೊರಡಿಸಿರುವ ವಿಷಯ ಹೊರಬಿದ್ದಿದೆ. ಈ ಬಾರಿ ಹೇಗಾದರೂ ಮಾಡಿ ಎಂಎಲ್ಎ ಚುನಾವಣೆ ಅಖಾಡಕ್ಕೆ ಇಳಿಯಲು ಪ್ಲಾನ್ ಮಾಡಿಕೊಂಡಿದ್ದ. ಜೈಲಿಗೆ ಹೋದರೆ ಒಂದೆರಡು ದಿನಗಳಲ್ಲಿ ಜಾಮೀನು ಪಡೆದು ಹೊರಗಡೆ ಬರುತ್ತೇನೆ. ನನ್ನನ್ನು ಸ್ವಾಗತಿಸಲು ಬೃಹತ್ ಪ್ರಮಾಣದಲ್ಲಿ ತಯಾರಿ ಮಾಡಿಕೊಳ್ಳಿ. ಅಲ್ಲದೆ, ಅಫಲಪುರದಲ್ಲಿ ಸನ್ಮಾನ ಸಮಾರಂಭ ಏರ್ಪಸುವ ಮೂಲಕ ರಾಜಕೀಯ ಶಕ್ತಿ ಪ್ರದರ್ಶಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದ ಅಂಶ ಬಯಲಿಗೆ ಬಂದಿದೆ.
ಹೆಡ್ ಮಾಸ್ಟರ್ ಕಾಶೀನಾಥಗೆ ಫುಲ್ ಡ್ರಿಲ್
ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆ ಹೆಡ್ ಮಾಸ್ಟರ್ ಕಾಶೀನಾಥ ಚಿಲ್ನನ್ನು ಭಾನುವಾರ ದಿನವಿಡೀ ಅಧಿಕಾರಿಗಳು ಡ್ರಿಲ್ ಮಾಡುವ ಮೂಲಕ ತೀವ್ರ ವಿಚಾರಣೆಗೆ ಒಳಪಡಿಸಿದರು. ಕಲಬುರಗಿಯಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಗೆ ಕಾಶೀನಾಥ ನನ್ನು ಕರೆತಂದ ಅಧಿಕಾರಿಗಳು, ಎಂಎಸ್ಐ ಡಿಗ್ರಿ ಕಾಲೇಜಿನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಶ್ನಾವಳಿ ಮೂಲಕ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಹಲವು ವಿಷಯಗಳನ್ನು ಕಾಶೀನಾಥ ಬಾಯ್ಬಿಟ್ಟಿದ್ದು, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ.