ಜಿಲ್ಲೆ

ಕಳೆದ ಮೊಬೈಲ್ ಪತ್ತೆ ಇನ್ನು ಸುಲಭ

Dharwad

ಹುಬ್ಬಳ್ಳಿ: ಸಾರ್ವಜನಿಕರೇ, ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಕೂಡಲೇ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಇ-ಪೋರ್ಟಲ್​ನಲ್ಲಿ ಮನೆಯಲ್ಲೇ ಕುಳಿತು ದೂರು ನೀಡಿ, ಕೆಲವೇ ದಿನದಲ್ಲಿ ನಿಮ್ಮ ಮೊಬೈಲ್ ಪತ್ತೆಯಾಗಲಿದೆ. ಹೌದು. ಕಳೆದ ಐದು ದಿನಗಳಿಂದ ಹೊಸದೊಂದು ಉಪಕ್ರಮವನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಜಾರಿಗೆ ತರಲಾಗಿದೆ. ಅದರ ಮೂಲಕ ಈವರೆಗೆ ಕಳೆದು ಹೋದ ಸುಮಾರು 30 ಮೊಬೈಲ್​ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ರಮಣ್ ಗುಪ್ತಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಪೋರ್ಟಲ್ ಮೂಲಕ ದೂರು ದಾಖಲಿಸಿದ್ದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಅವರ ಮೊಬೈಲ್​ಗಳನ್ನು ವಾಪಸ್ ನೀಡಿದರು. ಕೆಲ ಮೊಬೈಲ್​ಗಳನ್ನು ಬೇರೆಬೇರೆ ಜಿಲ್ಲೆಗಳಲ್ಲಿ ಬಳಕೆ ಮಾಡುತ್ತಿದ್ದರು. ಟ್ರೇಸ್ ಮಾಡಿದಾಗ ಅವುಗಳ ಸ್ಥಳ, ಗುರುತು ಸಿಕ್ಕಿತು. ಬಳಕೆ ಮಾಡುತ್ತಿದ್ದವರಿಗೆ ಕಳೆದು ಹೋದ ಮೊಬೈಲ್ ನಿಮ್ಮ ಬಳಿ ಇದೆ ಎಂದು ತಿಳಿಸಿ, ಅಲ್ಲಿಂದ ವಾಪಸ್ ತರಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಇಂತಹ ಮೊಬೈಲ್ ಇಟ್ಟುಕೊಂಡವರ ಮೇಲೆ ಕೇಸ್ ಮಾಡದೇ ಮಾಹಿತಿ ನೀಡಿ ವಾಪಸ್ ತರಿಸುವ ಕೆಲಸವನ್ನು ಇಲಾಖೆ ಮಾಡಿದೆ ಎಂದರು.

ಪ್ರಾಯೋಗಿಕ ಪ್ರಯತ್ನ: ಇ ಪೋರ್ಟಲ್ ನಿರ್ವಹಣೆಗೆ ನಾಲ್ವರು ಸಿಬ್ಬಂದಿಯ ತಂಡ ರಚನೆ ಮಾಡಲಾಗಿದೆ. ಡಿಸಿಪಿ ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ಈ ತಂಡ ಕೆಲಸ ಮಾಡಲಿದೆ. ಪ್ರಾಯೋಗಿಕ ಹಂತದ ಐದು ದಿನದಲ್ಲಿ 30 ಮೊಬೈಲ್ ಪತ್ತೆ ಮಾಡಿದ ಈ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ಆಯುಕ್ತ ಗುಪ್ತಾ ಅವರು ಹೇಳಿದರು.

ಪೋರ್ಟಲ್​ನಲ್ಲಿ ಹೀಗೆ ದೂರು ನೀಡಿ

ಸರ್ಕಾರದ ಇ-ಸ್ಪಂದನ ಕಾರ್ಯಕ್ರಮದಡಿ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಇ- ಪೋರ್ಟಲ್​ನಲ್ಲಿ ಪೊಲೀಸ್ ಇಲಾಖೆ ನೀಡಿರುವ ಮೊಬೈಲ್ ಸಂಖ್ಯೆಗೆ ಹಾಯ್ ಎಂದು ಮೆಸೇಜ್ ಕಳುಹಿಸುವ ಮೂಲಕ ಅರ್ಜಿ ಪಡೆಯಬಹುದು. ಮೊಬೈಲ್ ಕಳೆದಾಗ ಅಥವಾ ಕಳ್ಳತನವಾದ ಕೂಡಲೇ 8277952828 ಸಂಖ್ಯೆಗೆ ‘ಹಾಯ್’ ಮೆಸೇಜ್ ಕಳುಹಿಸಬೇಕು. ಸಂದೇಶ ಕಳುಹಿಸಿದ ವಾಟ್ಸಪ್ ನಂಬರಿಗೆ ಒಂದು ಲಿಂಕ್ ಸಂದೇಶ ಬರುತ್ತದೆ. ಆ ಲಿಂಕ್ ತೆರೆದು ಕೇಳಲಾದ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಿ, ಸಬ್​ವಿುೕಟ್ ಮಾಡಿದರೆ ದೂರು ದಾಖಲಾಗುತ್ತದೆ. ಈ ದೂರು ಆಧರಿಸಿ ಕಳೆದುಹೋದ ಮೊಬೈಲ್​ನ್ನು ಪೊಲೀಸರು ಪತ್ತೆ ಮಾಡಲು ಕ್ರಮ ಕೈಗೊಳ್ಳುವರು. ಪತ್ತೆಯಾಗದ ಮೊಬೈಲ್​ನ್ನು ಬ್ಲಾಕ್ ಮಾಡಿ, ದುರುಪಯೋಗ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು. ಪೊಲೀಸ್ ಇಲಾಖೆ ಜಾರಿಗೆ ತಂದಿರುವ ನೂತನ ಉಪಕ್ರಮದ ಪ್ರಯೋಜನವನ್ನು ಜನರು ಪಡೆಯಬೇಕೆಂದು ಪೊಲೀಸ್ ಆಯುಕ್ತರು ಮನವಿ ಮಾಡಿದರು.