ಬಸವನಬಾಗೇವಾಡಿ: ಕವಿಗಳು ತಮ್ಮ ಸೂಕ್ಷ್ಮ ಕಣ್ಣುಗಳನ್ನು ತೆಗೆದು ನೋಡಿದಾಗ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯವಾಗುತ್ತದೆ. ಕವಿಗಳು ಸಮಾಜದ ಕಣ್ಣುಗಳಿದ್ದಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಕವನಗಳು ಸಹಹೃದಯ ಮನಸೂರೆಗೊಂಡಾಗ ಮಾತ್ರ ಕವಿ ಅತ್ಯಂತ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕವಿಗಳು ತಮ್ಮ ಕವನಗಳನ್ನು ಸಮಾಜಕ್ಕೆ ದಾರಿದೀಪವಾಗುವಂತೆ ರಚಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡಿ, ಅತ್ಯಂತ ಸೂಕ್ಷ್ಮಸಂದೇಶದ ಕಾವ್ಯ ರಚಿಸುವ ಮೂಲಕ 25ಕ್ಕೂ ಹೆಚ್ಚು ಕವಿಗಳು ವೈಚಾರಿಕ ನೆಲೆಗಟ್ಟಿನಲ್ಲಿ ವರ್ತಮಾನದ ಸನ್ನಿವೇಶಗಳನ್ನು ಬಿಂಬಿಸಿರುವುದು ಸಮ್ಮೇಳನದ ಮೆರುಗನ್ನು ಹೆಚ್ಚಿಸಿದೆ ಎಂದು ಹೇಳಿದರು.
ಶಿಕ್ಷಕಿ, ಸಾಹಿತಿ ಶಿಲ್ಪಾ ಭಸ್ಮೆ, ನಿಂಗಪ್ಪ ಬೊಮ್ಮನಹಳ್ಳಿ, ಸಂಗಮೇಶ ಓಲೇಕಾರ, ಪರಶುರಾಮ ದಿಂಡವಾರ, ಜಗದೀಶ ಕೊಟ್ರಶೆಟ್ಟಿ, ಪರಸಪ್ಪ ಕಳ್ಳಿಗುಡ್ಡ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧರಾಮ ಬಿರಾದಾರ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಬಿ.ಎಸ್. ಚನಗೊಂಡ, ವಿನೂತ ಕಲ್ಲೂರ, ಸಿದ್ದು ಬಾಗೇವಾಡಿ, ಎಸ್.ಎಸ್.ಇಂಗಳೇಶ್ವರ ಇತರರಿದ್ದರು.
ಎಚ್.ಬಿ.ಬಾರಿಕಾಯಿ ಸ್ವಾಗತಿಸಿದರು. ಬಸವರಾಜ ಇವಣಗಿ, ಪುಷ್ಪಾ ಕುಲಕರ್ಣಿ ನಿರೂಪಿಸಿದರು. ಪ್ರಕಾಶ ಬೆಣ್ಣೂರ ವಂದಿಸಿದರು.