ಸಿದ್ದಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಡ್ಕಣಿಯಲ್ಲಿ ಕಾಲೇಜಿನ ಕನ್ನಡ ವಿಭಾಗದವರಿಂದ ಕವಿತೆ ರಚನಾ ತರಬೇತಿ ಶಿಬಿರ ಶುಕ್ರವಾರ ನಡೆಯಿತು.
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಕವಿತೆ ರಚನೆಯ ನಿಯಮಗಳು, ಸರಳವಾಗಿ ಕವಿತೆ ರಚಿಸಲು ಅನುಸರಿಸಬೇಕಾದ ಕ್ರಮ ಹಾಗೂ ಪ್ರಾಸಬದ್ಧ ಕವಿತೆ ರಚಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಉದಾಹರಣೆ ನೀಡುತ್ತ ವಿದ್ಯಾರ್ಥಿಗಳು ಕವಿತೆಯ ರಚನೆಯಲ್ಲಿ ತೊಡಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಕವಿತೆ ರಚನೆಯ ಆಸಕ್ತಿ ಮೂಡಿಸಿದರು.
ಕಾಲೇಜ್ ಪ್ರಾಚಾರ್ಯ ಡಾ.ಎನ್. ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಅಕ್ಷತಾ ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಡಿ.ಎಸ್. ಸ್ವಾಗತಿಸಿದರು. ಸುಚಿತ್ರ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕಿ ನಯನ ವಂದಿಸಿದರು.