ವಿಜಯಪುರ ನಗರದ ಯೋಗಾಪುರದಲ್ಲಿ ಕವಿ ರಾಮಣ್ಣ ಬೋಳೆಗಾಂವ ಅವರ ಕೃತಿ ‘ಜೀವಸೆಲೆ ಜ್ಞಾನನೆಲೆ’ ಬಿಡುಗಡೆಗೊಳಿಸಲಾಯಿತು. ಸಾಹಿತಿ ಕಾಂತು ಇಂಡಿ, ಸಂಸದ ರಮೇಶ ಜಿಗಜಿಣಗಿ, ಶಂಕರ ಬೈಚಬಾಳ ಮತ್ತಿತರರಿದ್ದಾರೆ.  
ಜಿಲ್ಲೆ

ಕಾವ್ಯ ದೇಶ ಕಟ್ಟುವ ಕೆಲಸ ಮಾಡುತ್ತದೆ; ಸಾಹಿತಿ ಕಾಂತು ಇಂಡಿ

ವಿಜಯಪುರ: ಕಾವ್ಯ ದೇಶವನ್ನು ಕಟ್ಟುವ ಕೆಲಸ ಮಾಡುತ್ತದೆ. ಹಾಗೆಯೇ ದ್ವೇಷವನ್ನು ಅಳಿಸುತ್ತದೆ ಎಂದು ಸಾಹಿತಿ ಕಾಂತು ಇಂಡಿ ಹೇಳಿದರು.

ಅವರು ವಿಶ್ವಚೇತನ ಪ್ರಕಾಶನ ವಿಜಯಪುರ ಅಡಿಯಲ್ಲಿ ನಗರದ ಸ್ಮಾರ್ಟ್‌ಸಿಟಿ ಫೇಸ್ ನಂ.2 ಯೋಗಾಪುರದಲ್ಲಿ ನಡೆದ ಕವಿ ರಾಮಣ್ಣ ಬೋಳೆಗಾಂವ ಅವರ ಕೃತಿ ‘ಜೀವಸೆಲೆ ಜ್ಞಾನನೆಲೆ’ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿ ಪರಿಚಯಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ನಾಡಿನ ಕವಿಪುಂಗವರ ಶ್ರೇಷ್ಠ ಕಾವ್ಯ ರಚಿಸಿ ದೇಶ ಬಾಂಧವರ ಹೃದಯ ಬೆಸೆದಿದ್ದಾರೆ. ಅಂತಹ ದೇಶಾಭಿಮಾನದ ಜೀವಸೆಲೆಯ ಕವನಗಳು ರಾಮಣ್ಣ ಬೋಳೆಗಾಂವ ಅವರ ‘ಜೀವಸೆಲೆ ಜ್ಞಾನನೆಲೆ’ ಪುಸ್ತಕದಲ್ಲಿ ಇವೆ ಎಂದರು.

ಕೃತಿ ಬಿಡುಗಡೆ ಮಾಡಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ದೇಶಭಿಮಾನದ ವಿಷಯ ಬಿತ್ತರಿಸುವಲ್ಲಿ ಸಾಹಿತಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ಹಿರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ತನ್ನನ್ನು ತಾನು ಕಾಣಲು, ತಾನೇ ತಾನಾಗಲೂ ದೇಶಿ ಚಿಂತನೆ ವಿಚಾರಗಳು ಈ ನೆಲದ ಜಾನಪದ ರಶ್ಮಿಗಳು ಇಲ್ಲಿಯ ಬರಹಗಾರರಿಗೆ ಇರಬೇಕು. ಅವು ರಾಮಣ್ಣ ಅವರ ಬರಹದಲ್ಲಿ ಸಾಕಷ್ಟಿವೆ ಎಂದು ಹೇಳಿದರು.

ಈಶಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿ.ಕೆ. ಗೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಪ್ಪ ಬೋಳೆಗಾಂವ, ಅರ್ಜುನ ಲಮಾಣಿ, ಬಸವರಾಜ ಇಂಗಳೇಶ್ವರ, ಅಣ್ಣಪ್ಪಗೌಡ ಪಾಟೀಲ, ಶಿವಶರಣ ನಿಂಬಾಳ ಮತ್ತಿತರರಿದ್ದರು.