ಜಿಲ್ಲೆ

ಮಾನಸಿಕ ಒತ್ತಡ ಕಡಿಮೆ ಮಾಡುವ ಸಂಗೀತ: ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಾನಸಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಗಮ ಸಂಗೀತ ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ಕೃಷಿಕ್ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸುಪ್ರಸಿದ್ಧ ಕವಿಗಳಾದ ಕೆ.ಎಸ್.ನರಸಿಂಹಸ್ವಾಮಿ, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನಿಸಾರ್‌ಅಹಮದ್, ಗೋಪಾಲಕೃಷ್ಣ ಅಡಿಗ, ಪ್ರೊ.ದೊಡ್ಡರಂಗೇಗೌಡ ಹಾಗೂ ಡಾ.ಸಿದ್ದಲಿಂಗಯ್ಯ ಅವರ ಜನ್ಮದಿನದ ಅಂಗವಾಗಿ ಮರೆಯಲಾಗದ ಮಹನೀಯರು ಕವಿಗಳ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷಾ ಸಮಯದಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸುಗಮ ಸಂಗೀತ ಆಲಿಸಿ ಸಹಕಾರಿಯಾಗುತ್ತದೆ. ವೈದ್ಯಲೋಕವು ಸಂಗೀತ ಥೆರಪಿಯಿಂದ ಸಾಕಷ್ಟು ರೋಗಳನ್ನು ಗುಣಪಡಿಸುವ ವಿಧಾನಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದರು.

ಸುಗಮ ಸಂಗೀತ ಪರಿಷತ್‌ನ ಮೈಸೂರು ಜಿಲ್ಲಾಧ್ಯಕ್ಷ ಡಾ.ನಾಗರಾಜು ವಿ.ಭೈರಿ ಮಾತನಾಡಿ, ವಿದ್ಯಾರ್ಥಿಗಳು ಸುಗಮ ಸಂಗೀತ ಕೇಳುವುದರಿಂದ ಮನೋಲ್ಲಾಸ ಮತ್ತು ಪಠ್ಯ ಪ್ರವಚನದ ಜ್ಞಾಪಕ ಶಕ್ತಿ ವೃದ್ದಿಸುತ್ತದೆ. ಸಿನಿಮಾ ಹಾಡು ಕೇಳುವುದು ಮತ್ತು ನೋಡುವುದನ್ನು ಪರೀಕ್ಷಾ ದಿನಗಳಲ್ಲಿ ದೂರವಿಡಿ. ಕ್ರೀಡೆ ಅಭ್ಯಾಸ ಮಾಡಿ ಮತ್ತು ಸುಗಮ ಸಂಗೀತ ಕೇಳಿ. ನಿರಂತರವಾಗಿ ಎಲ್ಲ ಪಠ್ಯವನ್ನು ಶ್ರದ್ದೆಯಿಂದ ಓದಿ, ಬರೆಯಿರಿ. ಆಗ ಉತ್ತಮ ಅಂಕ ನಿಮ್ಮದಾಗುತ್ತದೆ. ಭವಿಷ್ಯಕ್ಕೆ ಹೊಸ ಬೆಳಕು ಅರಳುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಮಂಜುಳಾ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕವಿಗಳ ಪರಿಚಯ ಮತ್ತು ಸುಗಮ ಸಂಗೀತ ಮೂಲಕ ಗೀತೆಗಳ ಸಾರ ತಿಳಿಸುವ ಅವಶ್ಯವಿದೆ. 10ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಮಾತ್ರ ಕವಿಗಳನ್ನು ಓದುತ್ತಾರೆ, ಗೀತೆಗಳನ್ನು ಕಲಿಯುತ್ತಾರೆ. ಆದರೆ ಕಾಲೇಜು ಹಂತದಲ್ಲಿ ನಾಡಿನ ಕವಿಗಳ ಪರಿಚಯ ಕಡಿಮೆಯಾಗುತ್ತದೆ ಎಂದರು.

ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಡೇವಿಡ್ ಪ್ರತಿಭಾಂಜಲಿ, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಂಜುನಾಥ ನಾಯ್ಡು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಘಟಕ-1ರ ನಿಲಯ ಮೇಲ್ವಿಚಾರಕ ಎಚ್.ಎನ್.ರವಿ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ್, ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಚಾಂಚಿ ರಕ್ಷಿತ್‌ರಾಜ್ ಇತರರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕವಿಗಳು ರಚಿಸಿರುವ ಗೀತೆಗಳನ್ನು ಗಾಯಕರಾದ ಪ್ರೊ.ಡೇವಿಡ್ ಪ್ರತಿಭಾಂಜಲಿ, ಶಂಕರ್, ಸಿಂಚನಾ ಗೋಪಾಲ್, ದಿಶಾ ಜೈನ್, ನೇತ್ರಾವತಿ, ವೃಂದಕಾಮತ್ ಹಾಡಿ ರಂಜಿಸಿದರು.