Poetry is what opens a closed mind.  
ಜಿಲ್ಲೆ

ಮುಚ್ಚಿದ ಮನಸ್ಸು ತೆರೆದಿಡುವುದೇ ಕಾವ್ಯ

Vijayapura - Desk - Doddanagouda Gudihindin

ರಬಕವಿ/ಬನಹಟ್ಟಿ: ಸಾಹಿತ್ಯ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ. ಕಾವ್ಯ ರಚನೆ ಎಂದರೆ ಮುಚ್ಚಿದ ಮನಸ್ಸುಗಳನ್ನು ತೆರೆದಿಡುವುದು. ಈ ಕ್ರಿಯೆಯಲ್ಲಿ ಕವಿಯ ಅಂತರಂಗದಲ್ಲಿ ಅಡಗಿದ ಅನುಭವವು ಅನುಭಾವವಾಗಿ ಹೊರಹೊಮ್ಮುವಧ್ವನಿಯನ್ನು ಕವಿ ಮ.ಕೃ. ಮೇಗಾಡಿ ಅವರ ದೇವನೊಲುಮೆ ಕೃತಿಯಲ್ಲಿ ಕಾಣುತ್ತೇವೆ ಎಂದು ಯಲ್ಲಟ್ಟಿ ಗ್ರಾಮದ ಕೊಣ್ಣೂರ ಪ.ಪೂ. ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಚಂದ್ರಕಾಂತ ಹೊಸೂರ ಹೇಳಿದರು.

ರಬಕವಿ ನಗರದ ಜವಳಿ ಉದ್ದಿಮೆದಾರ ಮಲ್ಲೇಶಪ್ಪ ಶಿ. ಕುಚನೂರ ಅವರ ನಿವಾಸದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-41ರಲ್ಲಿ ದೇವನೊಲುಮೆ ಕೃತಿ ಅವಲೋಕಿಸಿ ಮಾತನಾಡಿದ ಅವರು, ಕವಿ ತನಗೆ ಕಾಡಿದ ಅಂತರಂಗದ ಭಾವರಸಾಯನಗಳನ್ನು ಕವಿತೆಗಳ ಮೂಲಕ ಉಣಬಡಿಸಿದ್ದಾರೆ. ಮೇಗಾಡಿ ಅವರು ಕವಿತೆಗಳಲ್ಲಿ ನಮ್ಮ ನಾಡಿನ ಪ್ರಕೃತಿ ಸೌಂದರ್ಯ, ನಾಡು-ನುಡಿ, ದೇಶಪ್ರೇಮ, ಶರಣರು, ಸಂತರು, ಸಾಹಿತಿಗಳ ಬದುಕಿನ ಚಿತ್ರಣವನ್ನೇ ಕಾವ್ಯವಾಗಿಸಿದ್ದಾರೆ ಎಂದರು.

ಹಿರಿಯ ಸಾಹಿತಿ ಜಿ.ಎಸ್. ವಡಗಾಂವಿ, ಮಹಾದೇವ ಕವಿಶೆಟ್ಟಿ, ಡಾ. ರವಿ ಜಮಖಂಡಿ, ಯಶವಂತ ವಾಜಂತ್ರಿಯವರು ಕಾವ್ಯ ಮಾನವೀಯ ಮೌಲ್ಯಗಳ ತುಡಿತ ಹೊಂದಿರುತ್ತದೆ. ಕೃತಿಗಳ ಅವಲೋಕನದಿಂದ ಓದುಗರಿಗೆ ವೈವಿಧ್ಯಮಯ ಕೃತಿಗಳ ಪರಿಚಯ ಹಾಗೂ ಓದುವ ಆಸಕ್ತಿ ಹೆಚ್ಚಿಸುತ್ತದೆ ಎಂದರು.

ಹನಗಂಡಿ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ಯಲ್ಲಪ್ಪ ಇಮಡೆನ್ನವರ, ಮಹಾಲಿಂಗಪುರ ವಲಯ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ದೇವನೊಲುಮೆ ಸಂಕಲನದಲ್ಲಿರುವ ಹಲವು ಕವಿತೆಗಳನ್ನು ಹಾಡಿ ಗಮನ ಸೆಳೆದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು.

ಜಿಲ್ಲಾ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲೇಶಪ್ಪ ಕುಚನೂರ, ಜಮಖಂಡಿ ತಾಲೂಕಾ ಕಸಾಪ ಮಾಜಿ ಅಧ್ಯಕ್ಷ ಯಶವಂತ ವಾಜಂತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಂದ್ರು ಬಕನೆತ್ತಿ, ಪರಪ್ಪ ಪೂಜಾರಿ, ಎನ್.ಎನ್. ಬೇವೂರ ಇದ್ದರು.

ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎ.ಜಿ. ಮಹಾಲಿಂಗಪುರ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ ನಿರೂಪಿಸಿದರು.

ಶಿವಾನಂದ ದಾಶಾಳ, ಶಿವಾನಂದ ಬಾಗಲಕೋಟೆಮಠ, ಎಂ.ಎಸ್.ಬದಾಮಿ, ಬಸವರಾಜ ಗುಡೋಡಗಿ, ಗುರು ಬಾಪೂರೆ, ಬ್ರಿಜ್ ಮೋಹನ್ ಡಾಗಾ, ಎಸ್.ಆರ್. ರಾವಳ, ಈರಣ್ಣ ಗಣಮುಖಿ, ಸದಾಶಿವ ಖವಾಸಿ, ಶರತ್ ಜಂಬಗಿ, ಡಿ.ಬಿ.ಜಾಯಗೊಂಡ, ನವೀನ ಕುಚನೂರ, ಕಲಾವಿದ ಈರಪ್ಪ ಮನ್ಮಿ, ಬಿ.ಪಿ.ತೇರಣಿ, ಡಾ.ಎಸ್.ಎಸ್. ಕುಚನೂರ, ಮಹಾಶಾಂತ ಶೆಟ್ಟಿ ಮತ್ತಿತರರಿದ್ದರು.