ಮಂಡ್ಯ: ನಾನು ಎಂಬುದು ಅಹಂಕಾರ, ನಾವು ಎಂಬುದು ಅಲಂಕಾರ. ಇತ್ತೀಚಿನ ದಿನಗಳಲ್ಲಿ ಯಾವ ರೀತಿ ಬದುಕಬೇಕು ವರ್ತಿಸಬೇಕು ಎಂಬುದಕ್ಕೆ ಪುಸ್ತಕ ಬರೆಯಬೇಕಾಗಿರುವುದು ವಿಷಾದನೀಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಿರಿ ಪ್ರಕಾಶನ ಮಂಡ್ಯ, ಕರ್ನಾಟಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ತಾರಾ ಸಮೂಹ ಸಂಸ್ಥೆ ಮಾಲೀಕ ಡಾ.ಕೆ.ಚಂದ್ರಶೇಖರ್ ಬರೆದಿರುವ ’ಮುಖವಾಡಗಳು’ ಕವನ ಸಂಕಲನ ಬಿಡುಗಡೆಗೊಳಿಸಿ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ಹಲವು ಸಮಸ್ಯೆಗೆ ವಿದ್ಯಾವಂತರು ಕಾರಣ. ಅವರ ವಿದ್ಯೆ ದೇಶ ಕಟ್ಟುವಲ್ಲಿ ಉಪಯೋಗವಾಗಬೇಕು. ಮನುಷ್ಯ ಬುದ್ಧಿವಂತರಾದರೆ ಸಾಲದು ಹೃದಯವಂತರಾಗಬೇಕು ಎಂದರು.
ನಮ್ಮ ಓದು ಎಷ್ಟು ಜನರ ಮುಖದಲ್ಲಿ ನಗು ತರಿಸಿದೆ ಎಂಬುದು ಮುಖ್ಯ. ವೃತ್ತಿಯ ಜತೆಗೆ ಬರವಣಿಗೆ ಪ್ರೌವೃತ್ತಿಯಲ್ಲಿ ತೊಡಗಿರುವ ವೈದ್ಯರು ಅಪರೂಪ. ಅಂತಹ ಕೆಲಸದಲ್ಲಿ ಡಾ.ಚಂದ್ರಶೇಖರ್ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದ ಅವರು, ಮನೆಯೇ ಸಾಂತ್ವನ ಕೇಂದ್ರ. ಅವಿಭಾಜ್ಯ ಕುಟುಂಬ ಒಡೆದು ಹೋಗಿರುವುದೇ ಹಲವು ಸಮಸ್ಯೆಗೆ ಕಾರಣ. ಕೃಷಿ ಎಂಬುದು ಸಂಸ್ಕೃತಿ ಲಾಂಛನವಾಗಬೇಕು. ಬದುಕು ಎಂದರೆ ಸಂಪತ್ತಿನಲ್ಲಿ ಸರಳತೆ. ಸಂಪತ್ತಿಗೆ ಬೆಲೆ ಕಟ್ಟಬಹುದು. ಸರಳತೆಗೆ ಬೆಲೆ ಕಟ್ಟಲಾಗದು. ನಾವು ಸರಳತೆಗೆ ಹೋಲಿಕೆ ಮಾಡಿಕೊಳ್ಳಬೇಕು. ಬೇರೆಯವರ ಸಂತೋಷ ಕಂಡು ಜನ ಸಂತೋಷವಾಗಿಲ್ಲ. ಬಡತನದಲ್ಲೂ ಸಿರಿತನ ಕಾಣಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ಡಾ.ಚಂದ್ರಶೇಖರ್ ವೈವಿಧ್ಯಮಯ ಕವನಗಳ ಮೂಲಕ ಜನರ ಮುಖವಾಡಗಳನ್ನು ಕಳಚಿದ್ದಾರೆ. ಮೊಬೈಲ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮಲ್ಲಿ ಬರುವ ರೋಗಿಗಳ ಭಾವನೆಗಳನ್ನು ಅರಿತು ಅದಕ್ಕೆ ಕಾವ್ಯ ರೂಪ ಕೊಟ್ಟಿದ್ದಾರೆ. ಬಣ್ಣ ಹಚ್ಚದೇ ನಾಟಕವಾಡುವ ಜನರ ಮುಖವಾಡಗಳನ್ನು ಕಳಚಿ ತೋರಿಸಿದ್ದಾರೆ ಎಂದರು.
ಡಾ.ಚಂದ್ರಶೇಖರ್ ಮಾತನಾಡಿ, ನನ್ನ ಅರಿವಿನ ಪರಿಧಿಗೆ ಬಂದ ವಿಷಯಗಳಿಗೆ ಅಕ್ಷರ ರೂಪ ನೀಡಿದ್ದೇನೆ. ಪಾಸ್‌ಬುಕ್,ಫೇಸ್‌ಬುಕ್, ವಾಟ್ಸ್‌ಆ್ಯಪ್ ನಡುವೆ ಪುಸ್ತಕ ಸಂಸ್ಕೃತಿ ನಶಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸಾಹಿತಿ ಪ್ರೊ.ಎಚ್.ಎಸ್.ಮುದ್ದೇಗೌಡ, ಮಿಮ್ಸ್ ನಿವೃತ್ತ ಅಧೀಕ್ಷಕ ಡಾ.ಎನ್.ರಾಮಲಿಂಗೇಗೌಡ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಬಿಜಿಎಸ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಆದರ್ಶ, ಕರ್ನಾಟಕ ಸಂಘದ ಮಂಜುಳಾ ಉದಯಶಂಕರ್, ಚ.ಮ.ಉಮೇಶ್, ಅನಿತಾ, ಡಾ.ಮಾದೇಶ್ ಇದ್ದರು.