ಮಂಡ್ಯ: ಕವಿಗಳು ಹೊಸ ಮನ್ವಂತರ ಸೃಷ್ಟಿಸುವ ಹಾಗೂ ಸಮಾಜದಲ್ಲಿ ಸಮಾನತೆ ಸಾರುವ ಕೃತಿ ರಚಿಸಬೇಕು. ಜತೆಗೆ ಸಾಹಿತ್ಯ ಎಂಬುದು ತೆರೆದ ಪುಸ್ತಕವಾಗಿರಬೇಕು ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ ಅಭಿಪ್ರಾಯಪಟ್ಟರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ಕಲ್ಪನಾ ಲಹರಿ’ ಕವನ ಸಂಕಲನ ಬಿಡುಗಡೆ, 32ನೇ ರಾಜ್ಯಮಟ್ಟದ ಕವಿ ಕಾವ್ಯಮೇಳ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಅಭಿನಂದನೆ ಹಾಗೂ ಅಂಕವೀರ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿನ ಸಾಹಿತ್ಯ ಕ್ಷೇತ್ರ ವಾಸ್ತವತೆಯನ್ನು ತೆರೆದಿಡಬೇಕು. ಈ ಹಿಂದೆ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ವಾಸ್ತವತೆ ಕಟ್ಟಿಕೊಟ್ಟಿದ್ದರ ಪರಿಣಾಮ ಸಾಕಷ್ಟು ಸಂಚಲನ ಮೂಡಿತ್ತು, ಅದು ಹೊಸ ತಲೆಮಾರಿಗೆ ಅಂದಿನ ಬದುಕು- ಬವಣೆ ಬಿತ್ತರಿಸಿಕೊಟ್ಟಿತು ಎಂದರು.
ಕಲ್ಪನಾ ಲಹರಿ ಕೃತಿ ಬಿಡುಗಡೆಗೊಂಡಿದ್ದು ಇದರಲ್ಲಿ ಹೊಸ ಕವಿತೆ- ಕವನಗಳು ಮುದ್ರಿತಗೊಂಡಿರುವುದರಿಂದ ಹೊಸ ಕವಿಗಳಿಗೆ ಬರಹಗಾರರಿಗೆ ಸಂತೋಷವಾಗುತ್ತದೆ. ಸಾಹಿತಿಗಳ ಸಾಹಿತ್ಯದಿಂದ ಹೊಸ ಸಮಾಜ ಕಟ್ಟಲಿಕ್ಕೆ ಪ್ರೇರಣೆಯಾಗಬೇಕು. ಗಟ್ಟಿತನದ ಸಾಹಿತ್ಯ ಬರಹಗಾರರಿಂದ ಬರಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಈ.ಗಂಗೇಗೌಡ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಸಾಹಿತಿ ಜಿ.ರಾಧಾಕೃಷ್ಣ ವೈದ್ಯ, ವಕೀಲ ಎಂ.ಗುರುಪ್ರಸಾದ್, ಮುಖಂಡರಾದ ಹಾವೇರಿ ನಾಗರಾಜು, ಶೈಲಜಾ ಕೋರಿಶೆಟ್ಟರ್ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗೌರವಿಸಲಾಯಿತು.