ಜಿಲ್ಲೆ

ಭಾರತೀಯ ಹಬ್ಬದ ಆಚರಣೆಗಿದೆ ವೈಜ್ಞಾನಿಕ ತಳಹದಿ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಭಾರತೀಯ ಸಂಸ್ಕೃತಿ ಬಿಂಬಿಸುವ ಹಬ್ಬ ಆಚರಣೆಗಳ ಹಿಂದೆ ವೈಜ್ಞಾನಿಕ ತಳಹದಿ ಮತ್ತು ಸತ್ವ ಅಡಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀರಂಜಿನಿ ಕಲಾ ವೇದಿಕೆ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಸಹನಾ ಸೇಲ್ಸ್ ಆ್ಯಂಡ್ ಸರ್ವೀಸಸ್, ಹೀರೋ ಎಲೆಕ್ಟ್ರಿಕಲ್ ಆ್ಯಂಡ್ ಮೋಟಾರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಕವನ ಸಂಕಲನ ಬಿಡುಗಡೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರ ಆಗಮನದಿಂದ ಭಾರತದಲ್ಲಿ ಜ.1ರಂದು ಹೊಸವರ್ಷ ಎಂದು ಕ್ಯಾಲೆಂಡರ್ ಬದಲಿಸುವ ದಿನವಾಗಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಜ.1ರಂದು ನಮಗೆ ಹೊಸ ವರ್ಷವೇನಲ್ಲ. ಅದು ನಾವೂ ಸರ್ಕಾರಿ ಕಚೇರಿ, ಬ್ಯಾಂಕಿಂಗ್ ವಹಿವಾಟಿನಲ್ಲಿ ಅನುಸರಿಸುವ ಕ್ಯಾಲೆಂಡರ್ ಮಾತ್ರವಾಗಿದೆ. ಆದರೆ ಭಾರತೀಯ ಸಂಸ್ಕೃತಿ ಬಿಂಬಿಸುವ ಪ್ರಾಕೃತಿಕ ಹಬ್ಬ, ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿಯ ಸತ್ವವಿದೆ. ಪ್ರಾಕೃತಿಕ ಬದಲಾವಣೆಯೊಂದಿಗೆ ಆರೋಗ್ಯಕರ ಮಾಹಿತಿಯಿದೆ ಎಂದು ಹೇಳಿದರು.

ಪ್ರಾಕೃತಿಕ ಬದಲಾವಣೆಯಲ್ಲಿ ಬರುವ ಯುಗಾದಿ ನಮಗೆ ಹೊಸ ವರ್ಷವಾಗಿದೆ. ಸೂರ್ಯ ತನ್ನ ದಿಕ್ಕನ್ನೂ ಬದಲಿಸುವ ಸಂಕ್ರಾಂತಿ, ಮಹಾಶಿವರಾತ್ರಿ, ದೀಪಾವಳಿ, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ಶ್ರೀರಾಮ, ಶ್ರೀಕೃಷ್ಣ ಸೇರಿದಂತೆ ಮಹಾಪುರುಷರ ಜಯಂತಿಗಳು, ಗ್ರಾಮೀಣ ಸೊಗಡಿನಿಂದ ಕೂಡಿದ ಹಬ್ಬಗಳು, ಮನೆ ಜನರನ್ನು ಸಂಭ್ರಮದಿಂದ ಇರುವಂತೆ ಆಚರಿಸುವ ಹಬ್ಬಗಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಜತೆ ವೈಜ್ಞಾನಿಕತೆಯ ಮಹತ್ವವಿದೆ ಎಂದು ತಿಳಿಸಿದರು.

ಇತ್ತೀಚಿನ ವರ್ಷದಲ್ಲಿ ನಮ್ಮ ದೇಶದ ಯುವ ಜನತೆ ಜ.1ರಂದು ಪಾಶ್ಚಾತ್ಯರಂತೆ ಮೋಜು-ಮಸ್ತಿಗೆ ಹೆಚ್ಚು ಮಹತ್ವ ಕೊಡದೆ, ಆಧ್ಯಾತ್ಮಿಕ ಕೇಂದ್ರಕ್ಕೆ ಹೋಗುತ್ತಿರುವುದು ಶ್ಲಾಘನೀಯ. ನಾವೂ ನವಯುಗದ ಅನ್ವೇಷಣೆಗಳಾದ ವಿಜ್ಞಾನ, ತಂತ್ರಜ್ಞಾನ ಮತ್ತು ಡಿಜಿಟಲೀಕರಣದೊಂದಿಗೆ ನಮ್ಮ ಸಾಹಿತ್ಯ ಸಂಸ್ಕೃತಿಯನ್ನೂ ವಿಶ್ವಕ್ಕೆ ಪರಿಚಯಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.

ಶ್ರೀರಂಜಿನಿ ಕಲಾವೇದಿಕೆ ಅಧ್ಯಕ್ಷ ಗಮಕ ವಿದ್ವಾನ್ ಸಿ.ಪಿ.ವಿದ್ಯಾಶಂಕರ್, ನಿವೃತ್ತ ಜೀವ ವಿಮೆ ಅಧಿಕಾರಿ ಡಾ.ಎಸ್.ಶ್ರೀನಿವಾಸಶೆಟ್ಟಿ, ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ, ವೈದ್ಯರಾದ ಡಾ.ಚಂದ್ರಶೇಖರ್, ಡಾ.ಟಿ.ಎಸ್.ಸತ್ಯನಾರಾಯಣ್‌ರಾವ್, ಕ್ರೀಡಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪಿ.ಎಂ.ಸೋಮಶೇಖರ್, ವಿನಯ್‌ಕುಮಾರ್, ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು, ಆನಂದರಾವ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ‘ಗೆಲುವು ನಗಬೇಕು ಮತ್ತು ಕಿಣ್ಣರ ಲೋಕ’ ಎರಡು ಕವನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು. ಅಂತೆಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಅಭಿನಂದಿಸಲಾಯಿತು.