ಹುಬ್ಬಳ್ಳಿ : ಕವಿಗಳು ಸಾಹಿತ್ಯ ರಚನೆಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು ಎಂದು ನವನಗರದ ಪ್ರೋಬಸ್ ಕ್ಲಬ್ ಅಧ್ಯಕ್ಷ ಶಿವಪ್ಪ ನೀರಾವರಿ ಹೇಳಿದರು.
ನವನಗರದ ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ ಹಿರಿಯ ನಾಗಿರಕರ ಕಲ್ಯಾಣ ಟ್ರಸ್ಟ್ ಮತ್ತು ಪಂಚಾಕ್ಷರಿ ನಗರ ನಿವಾಸಿಗಳ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಯೋಗಿ ಸುರೇಬಾನ ಅವರ ಆಶಾವಾದಿ ಕವನ ಸಂಕಲನವನ್ನು ಲೋಕಾರ್ಪಣಗೊಳಿಸಿ ಅವರು ಮಾತನಾಡಿದರು.
ಕವಿಗಳು ಓದು, ಬರಹ, ಕಲ್ಪನಾಶಕ್ತಿ, ಶಬ್ಧ ಭಂಡಾರ ಮತ್ತು ವಾಕ್ಯ ರಚನೆ ಸಾಮರ್ಥ್ಯವನ್ನು ಹೊಂದಿರಬೇಕು. ಉತ್ಸಾಹದೊಂದಿಗೆ ಕವಿತೆಗಳನ್ನು ಸಮಾಜಕ್ಕೆ ಮುಟ್ಟಿಸಬೇಕು ಎಂದು ತಿಳಿಸಿದರು.
ಅತಿಥಿಯಾಗಿದ್ದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ಕವಿಗಳು ಸಕಾರಾತ್ಮಕ ವಿಷಯಗಳನ್ನು ಅಳವಡಿಸಿಕೊಂಡು ಧನಾತ್ಮಕ ವಿಚಾರಗಳನ್ನು ಸಮಾಜಕ್ಕೆ ಮುಟ್ಟಿಸಬೇಕು ಎಂದು ಹೇಳಿದರು.
ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್ ಮಾಳವಾಡ ಮತ್ತು ಎಚ್. ಬಿ. ಹುದ್ದಾರ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಎಫ್. ವಿ. ಕಲ್ಲನಗೌಡರ ಅಧ್ಯಕ್ಷತೆ ವಹಿಸಿದ್ದರು.
ಕವಿ ಶಿವಯೋಗಿ ಸುರೇಬಾನ ತಮ್ಮ ಕಾವ್ಯ ರಚನೆಯ ವಿವರಗಳನ್ನು ಹಂಚಿಕೊಂಡರು. ರವೀಂದ್ರ ರಾಮದುರ್ಗ ಮತ್ತು ವಿ.ಎಸ್. ಪಾಟೀಲ ಸಂಗೀತ ಕಾರ್ಯಕ್ರಮ ನೀಡಿದರು. ಮಂಜುಳಾ ಸುರೇಬಾನ ನಿರೂಪಿಸಿದರು. ಎನ್.ಎಫ್ ಕುರ್ತಕೋಟಿ ವಂದಿಸಿದರು.