ಕನಕಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬದುಕು-ಬರಹದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮೀರ್ ಪ್ರಕಾಶನದ ಅಧ್ಯಕ್ಷೆ ಜ್ಯೋತಿ ಅಲ್ಲಾಗಿರಿರಾಜ್, ಸಾಹಿತಿ ಅಲ್ಲಾಗಿರಿರಾಜ್, ಕನ್ನಡ ಪ್ರಾಧ್ಯಾಪಕಿ ಡಾ. ಆಶಿಕಾ ಇತರರಿದ್ದರು. 
ಜಿಲ್ಲೆ

ಹಸಿದವರ, ತುಳಿತಕ್ಕೊಳಗಾದವರ ಪರವಾಗಿರಬೇಕು ಕವಿ, ಕಾವ್ಯ

Gangavati - Mohan Kumar H R

ಕನಕಗಿರಿ: ಕವಿ ಹಾಗೂ ಕಾವ್ಯ ಹಸಿದವರು, ತುಳಿತಕ್ಕೊಳಗಾದವರ ಪರವಾಗಿರಬೇಕು. ಆಗ ಮಾತ್ರ ಕವಿಗಿಂತ ಕವಿತೆ ಜನರ ಪರವಾಗಿರಲು ಸಾಧ್ಯ ಎಂದು ಪಟ್ಟಣದ ಸಮೀರ್ ಪ್ರಕಾಶನದ ಅಧ್ಯಕ್ಷೆ ಜ್ಯೋತಿ ಅಲ್ಲಾಗಿರಿರಾಜ ಹೇಳಿದರು.

ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸ.ಪ್ರ.ದ.ಕಾಲೇಜಿನಲ್ಲಿ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಬದುಕು-ಬರಹದ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ, ದೇಶದ ಐಕ್ಯತೆ, ಸಾರ್ವಭೌಮದ ಪರವಾಗಿ ಕವಿತೆ ಹುಟ್ಟಬೇಕೇ ವಿನಃ ಕೇವಲ ಹೆಣ್ಣಿನ ಸೌಂದರ್ಯದ ಪರವಾಗಿ ಇರಬಾರದು. ದೇಶದಲ್ಲಿ ಹಸಿದು ಸತ್ತವರು ಮತ್ತು ನಿತ್ಯ ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣಿನ ಪರವಾಗಿ ಕವಿತೆ ಮಿಡಿಯಬೇಕೆಂದರು.

ಕನ್ನಡ ಪ್ರಾಧ್ಯಾಪಕಿ ಡಾ. ಆಶಿಕಾ ಮಾತನಾಡಿ, ಕನಕಗಿರಿಯಲ್ಲಿ ಪ್ರತಿಭಾವಂತ ಬರಹಗಾರರಿಗೆ ಕೊರತೆಯಿಲ್ಲ. ಅದರಂತೆ ಒಬ್ಬ ಸಾಧಕನ ಹಿಂದೆ ಓರ್ವ ಮಹಿಳೆಯ ಶ್ರಮವಿರುತ್ತದೆ ಎನ್ನುವುದಕ್ಕೆ ಜ್ಯೋತಿ ಅಲ್ಲಾಗಿರಿರಾಜರೇ ಸಾಕ್ಷಿ ಎಂದರು.

ನಂತರ ಕವಿ-ಕಾವ್ಯ ಮುಖಾಮುಖಿ ಸಂದರ್ಭದಲ್ಲಿ ಗಜಲ್ ಕವಿ ಅಲ್ಲಾಗಿರಿರಾಜ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದು ಕೊರತೆಯಿದೆ. ಇದರಿಂದ ಕನ್ನಡ ಪುಸ್ತಕಗಳ ಮಾರಾಟದ ಸಮಸ್ಯೆಯೂ ಕಾಡುತ್ತಿದೆ. ಹಾಗಾಗಿ ಯುವ ಜನತೆ ಕವಿ-ಕಾವ್ಯವನ್ನು ಗಮನಿಸಬೇಕು ಎಂದು ಹೇಳಿದರು. ಪ್ರಾಧ್ಯಾಪಕಿ ಲಲಿತಾ ಇದ್ದರು.