ಮಡಿಕೇರಿ:
ದೂರದಲ್ಲಿ ಕಾಣುವ ಜೇನುಕಲ್ಲು ಬೆಟ್ಟ. ಹಾರಂಗಿ ನದಿಗೆ ಅಡ್ಡಲಾಗಿ ಎದ್ದು ನಿಂತಿರುವ ಬೃಹತ್ ಅಣೆಕಟ್ಟೆ, ಕಣ್ಣು ಹಾಯಿಸಿದಷ್ಟು ದೂರ ಹಿನ್ನೀರಿನಲ್ಲಿ ಸಂಗ್ರಹವಾಗಿರುವ ಅಗಾಧ ಜಲರಾಶಿ, ಇದರ ಮೇಲಿನಿಂದ ಆಗಾಗ್ಗೆ ಬೀಸಿ ಬರುವ ಕುಳಿರ್ಗಾಳಿ, ಜಲಾಶಯದ ಅಲೆಗಳ ಪಿಸುಮಾತಿನಂಥ ಮೆಲುಧ್ವನಿ.. ಹಾರಂಗಿ ಜಲಾಶಯದ ಅತಿಥಿಗೃಹದಲ್ಲಿನ ಇಂಥ ಸುಂದರ ವಾತಾವರÀಣದಲ್ಲಿ ಸ್ನೇಹಸಿರಿ ಬಳಗದ ವತಿಯಿಂದ ಭಾನುವಾರ ನಡೆದ ‘ಗ್ರೀಷ್ಮಸಿರಿ’ ಕವಿಗೋಷ್ಠಿ ಕವಿಮನಸ್ಸುಗಳ ಭಾವನೆಗಳನ್ನು ಸುಂದರವಾಗಿ ತೆರೆದಿಡುವಲ್ಲಿ ಯಶಸ್ವಿಯಾಯಿತು.
೧೩ ಕವಿಗಳು ಕಾರ್ಯಕ್ರಮದಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಒಂದಿಬ್ಬರು ಹೊರತುಪಡಿಸಿದರೆ ಉಳಿದ ಬಹುತೇಕ ಕವಿಗಳ ಕವನ ಮಳೆ, ಮುಂಗಾರು, ಮೋಡ, ಪ್ರಕೃತಿ, ಭೂಮಿಯ ಸುತ್ತಲೇ ಗಿರಿಕಿ ಹೊಡೆಯುತ್ತಾ ಮುದ ಕೊಟ್ಟವು. ಕವಿ ಯಾವಾಗಲೂ ವಿಭಿನ್ನವಾಗಿ ಯೋಚಿಸಬೇಕು ಎನ್ನುವ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರ ಮಾತು ಇಲ್ಲಿ ಹೆಚ್ಚು ಪ್ರಸ್ತುತವಾಗುವಂತೆ ಬಹುತೇಕ ಕವನಗಳಲ್ಲಿ ಏಕತಾನತೆ ಕಂಡುಬAತಾದರೂ ಕವಿಗಳ ಪ್ರಯತ್ನದ ಬಗ್ಗೆ ಅತಿಥಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.
ಪತ್ರಕರ್ತ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಾತುಮಂಡ ಬೀನಾ ಕಾಳಯ್ಯ ‘ಅಮೃತ ಸಿಂಚನ’ ಎನ್ನುವ ಕವನ ವಾಚಿಸಿದರು. ಮಳೆಯನ್ನು ಮುತ್ತಿನ ಹನಿ ಎಂದು ಬಣ್ಣಿಸುತ್ತಾ ಮಳೆಯಿಂದ ಜೀವ ಪಡೆದುಕೊಳ್ಳುವ ಜಲಪಾತಗಳು, ಮಳೆ ಬೀಳುತ್ತಿದ್ದಂತೆಯೇ ರೈತನ ಮುಖದಲ್ಲಿ ಅರಳುವ ಖುಷಿ, ಮಳೆಗಾಲದಲ್ಲಿ ಬೆಚ್ಚನೆ ಕಾಫಿಯ ಸ್ವಾಧವನ್ನು ಪದಗಳ ರೂಪದಲ್ಲಿ ಪೋಣಿಸಿ ಪ್ರಸ್ತುತಪಡಿಸಿದರು.
ಪೇರಿಯಂಡ ಯಶೋಧ ಅವರು ತಮ್ಮ ‘ಪುನರ್ವಸು’ ಕವನದಲ್ಲಿ ಮಳೆಗಾಲದ ನೆನಪುಗಳ ಮೆಲುಕು ಹಾಕಿದರು. ತೋಟಗಳಲ್ಲಿ ಜಿಗಣೆಗಳ ವೈಭವ, ಅಣಬೆ, ಏಡಿ, ಕಣಿಲೆಗಳ ಖಾದ್ಯದ ರುಚಿ ಇವರ ಕವನದಲ್ಲಿ ನುಸುಳಿ ಮರೆಯಾಯಿತು.
‘ಪ್ರಕೃತಿಯೇ ಕಾವ್ಯ’ ಎನ್ನುವ ಕವನ ವಾಚಿಸಿದ ಪುಷ್ಪ ಡಿ.ಹೆಚ್., ಭೂಮಿ, ಭಾನು ಸೇರಿ ನಿಸರ್ಗ ಸೌಂದರ್ಯ ದರ್ಶನ ಮಾಡುತ್ತಲೇ ಪ್ರಕೃತಿಯ ಎದುರು ಮನುಷ್ಯನ ವಿಕೃತಿ ಬಿಚ್ಚಿಟ್ಟರು.
ರಶ್ಮಿ ಕಾರ್ಯಪ್ಪ ಅವರು ತಮ್ಮ ‘ಪ್ರಕೃತಿ’ ಕವನದಲ್ಲಿ ನಿಸರ್ಗದಲ್ಲಿನ ಜೀವ ಸಂಕುಲದ ವಿಶೇಷತೆ, ಮನುಷ್ಯ ಏನೇ ಮಾಡಿದರೂ ಕ್ಷಮೆಯಾಧರಿತ್ರಿ ಆಗುವ ಪ್ರಕೃತಿ ಮಾತೆಯ ಸಹಿಷ್ಣುತೆಯನ್ನು ಕೊಂಡಾಡಿದರು.
ರೇಣುಕಾ ಸೋಮಯ್ಯ ‘ಮುಂಗಾರಿನ ಮಳೆ ಹರುಷವ ನೀಡಿದೆ’, ಕಣಜಾಲು ಪೂವಯ್ಯ ‘ಗ್ರೀಷ್ಮದ ಕೆನ್ನೀರು’ ಜನ್ವಿತ ‘ಹನಿಮುತ್ತು’ ಎನ್ನುವ ಕವನಗಳಲ್ಲಿ ಮುಂಗಾರು ಮಳೆ ವೈಭವ ಬಿಚ್ಚಿಟ್ಟರು.
ಉಳುವಂಗಡ ಕಾವೇರಿ ಉದಯ ತಮ್ಮ ‘ಚಲಿಸುವ ಮೋಡಗಳು’ ಕವನದಲ್ಲಿ ಈ ಮಳೆಗಾಲ ಶಾಂತವಾಗಿರಲಿ ಎನ್ನುವ ಆಶಯ ವ್ಯಕ್ತಪಡಿಸಿದರು. ಕುದುಪಜೆ ರಂಜಿತ್ ದಾಮೋದರ್ ‘ಹಾರಂಗಿಯ ಕಂಗಳು’ ಎನ್ನುವ ಕವನವನ್ನು ಸ್ಥಳದಲ್ಲೇ ರಚಿಸಿ ವಾಚಿಸುವ ಮೂಲಕ ಗಮನ ಸೆಳೆದರು.
ಪಿ.ಎಸ್. ವೈಲೇಶ್ ಅವರ ‘ನಿಮ್ಮವರಾರು ಇಲ್ಲಿಲ್ಲ. ನಿಮ್ಮಂತೆ ಇಲ್ಲಿ ಯಾರೂ ಇಲ್ಲ’ ಎನ್ನುವ ಕವನ ತನ್ನ ಗಂಭೀರತೆಯಿAದಾಗಿ ಮೆಚ್ಚುಗೆಗೆ ಪಾತ್ರವಾಯಿತು. ಸಾಧಕರ ನೆನೆದು ರಚಿಸಿದ ಕವನಲ್ಲಿ ಅವರಂಥವರೂ ಈಗಿಲ್ಲ ಎನ್ನುವ ಕೊರತೆಯನ್ನು ಕವಿ ಇಲ್ಲಿ ತೋಡಿಕೊಂಡರು.
ಹೇಮಲತಾ ಪೂರ್ಣಪ್ರಕಾಶ್ ‘ರಂಗು’ ಕವನದಲ್ಲಿ ಸೃಷ್ಟಿಯ ಸೊಬಗು ಹೊಗಳಿದರೆ, ಸುಮಿತ್ರಾ ವಿಶ್ವನಾಥ್ ‘ಚಡಪಡಿಕೆ’ ಎನ್ನುವ ಕವನ ವಾಚಿಸಿದರು. ಈರಮಂಡ ಹರಿಣಿ ವಿಜಯ ’ವೃಕ್ಷದೇವತೆ’ ಬಾಲಕ
ಮುಕ್ಕಾಟೀರ ಜಸ್ವಿನ್ ತಿಮ್ಮಯ್ಯ ‘ಅಪ’್ಪ, ಮುಕ್ಕಾಟಿರ ಹರಿಣಿ ಗಿರೀಶ್ ‘ಮರ’, ಗೀತಾಂಜಲಿ
‘ಜನನಿ ಜನ್ಮಭೂಮಿ’ ದುಡಿಯುವ ಮಹಿಳೆಯ ಸಂಕಟಗಳ ಬಗ್ಗೆ ಕವಿತಾ ಕೆ.ಎನ್. ‘ಸತಿ’, ಆಶಾ
‘ಚೆಲುವಿನ ಚಿತ್ತಾರ’ ಎನ್ನುವ ಕವನ ವಾಚಿಸಿದರು.
ಸೋಮವಾರಪೇಟೆಯ ಹಿರಿಯ ಕವಿ ವಿಜಯ್ ‘ಕಡು ಭ್ರಷ್ಟಾಚಾರಿಗಳ ಕೈಗೆ ಬಿದಿರಿನ ಬುಟ್ಟಿ ಕೊಡಿ..’ ಎನ್ನುವ ಕವನ ವಾಚಿಸಿ ಭವಿಷ್ಯದ ಆತಂಕಗಳ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದರು.