ಕೆ.ಆರ್.ಪೇಟೆ: ಯುವಕವಿಗಳು ಸಾಮಾಜಿಕ ಸಂದೇಶ ನೀಡುವ ಕವಿತೆಗಳ ರಚನೆಗೆ ಮುಂದಾಗಬೇಕು ಎಂದು ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಸಲಹೆ ನೀಡಿದರು.
ಪಟ್ಟಣದ ಪ್ರಗತಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕೃಷ್ಣರಾಜಪೇಟೆ ತಾಲೂಕು ಯುವ ಬರಹಗಾರರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯ ಸಂಸ್ಕೃತಿಯು ನಮಗೆ ಮಾನಸಿಕ ನೆಮ್ಮದಿ ನೀಡುವ ಜತೆಗೆ ನಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಸಿತಗೊಳಿಸುತ್ತದೆ. ಕಾವ್ಯ ರಚನೆಯು ನಮ್ಮನ್ನು ಸಮಾಜಮುಖಿಯಾಗಿ ಮುನ್ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಯುವಜನರು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಂಡು ಕಾವ್ಯಗಳು ಹಾಗೂ ಕವಿತೆ ರಚನೆಗೆ ಮುಂದಾಗಬೇಕು ಎಂದರು.
ಸಂಕ್ರಾಂತಿ ಸಂದರ್ಭದಲ್ಲಿ ಕವಿಗೋಷ್ಠಿ ಆಚರಿಸುತ್ತಿರುವುದು ಕೇವಲ ಸಾಂಕೇತಿಕವಾಗಿದೆ. ಕವಿಗಳು ಹಾಗೂ ಸಾಹಿತ್ಯದ ಒಲವಿರುವ ಜನರಿಗೆ ನಿತ್ಯವೂ ಸಂಕ್ರಾಂತಿ ಹಬ್ಬವೇ ಆಗಿರುವುದರಿಂದ ಯುವಜನರು ಹಾಗೂ ವಿದ್ಯಾರ್ಥಿಗಳು ಹಿರಿಯ ಕವಿಗಳು ಹಾಗೂ ಸಾಹಿತಿಗಳು ರಚಿಸಿರುವ ಕನ್ನಡ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡು ಸಾಹಿತ್ಯ ಕೃಷಿಗೆ ಕೈಹಾಕಿದರೆ ಖಂಡಿತವಾಗಿಯೂ ಯಶಸ್ಸನ್ನು ಗಳಿಸುವ ಜತೆಗೆ ಸಮಾಜಮುಖಿಯಾಗಿ ಹೆಜ್ಜೆಹಾಕಿ ನೊಂದವರು ಹಾಗೂ ತುಳಿತಕ್ಕೊಳಗಾದ ಜನರಿಗೆ ಕೈಲಾದ ಸಹಾಯವನ್ನೂ ಮಾಡಬಹುದಾಗಿದೆ ಎಂದು ಸತೀಶ್ ಜವರೇಗೌಡ ಹೇಳಿದರು.
ರಂಗಕರ್ಮಿ ಹಾಗೂ ಚಿಂತಕ ಶಶಿಧರ ಭಾರೀಘಾಟ್ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರ ನಿರ್ದೇಶಕ ಡಾ.ಗುಣವಂತ ಮಂಜು, ಸಾಹಿತಿ ಡಾ.ಕೆ.ಕಾಳೇಗೌಡ, ಕೆಬಿಸಿ ಮಂಜುನಾಥ, ವೈ.ಸಿ.ರಾಮಪ್ರಸಾದ್, ಕರವೇ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಸಮೀರ್ ಹಾಜರಿದ್ದರು.
ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಿಗೆ ಪ್ರಶಸ್ತಿಪತ್ರ ವಿತರಿಸಿದರು. ಅತಿಥಿಗಳು ಹಾಗೂ ಯುವ ಕವಿಗಳಿಗೆ ಎಳ್ಳು ಬೆಲ್ಲ ವಿತರಿಸಿ ಸಂಕ್ರಾಂತಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಗಾನಗಂಧರ್ವ ಸಂಗೀತ ಕಲಾ ತಂಡ ಸುಗಮಸಂಗೀತ ನಡೆಸಿಕೊಟ್ಟರು. ತಾಲೂಕು ಯುವ ಬರಹಗಾರರ ಸಂಘದ ಅಧ್ಯಕ್ಷ ಅಜರುದ್ದೀನ್, ಕಾರ್ಯದರ್ಶಿ ಧನಲಕ್ಷ್ಮೀ ಪ್ರಕಾಶ್ ಮತ್ತಿತರರಿದ್ದರು.