ಶಿವಮೊಗ್ಗ: ಜಿಲ್ಲೆಯ ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣಗಳಲ್ಲಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯದ ಎಫ್‌ಟಿಎಸ್‌ಸಿ(ತ್ವರಿತ ವಿಶೇಷ ನ್ಯಾಯಾಲಯ)-1 ಮತ್ತು 2(ಪೋಕ್ಸೊ)ರ ನ್ಯಾಯಾಧೀಶರು ಒಬ್ಬರಿಗೆ 20 ವರ್ಷ ಕಠಿಣ ಸಜೆ ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸೊರಬ ತಾಲೂಕಿನ ನಿವಾಸಿ ತಿಮ್ಮಪ್ಪ (42) ಮತ್ತು ಭದ್ರಾವತಿ ತಾಲೂಕಿನ ಗ್ರಾಮವೊಂದರ ವಾಸಿ ಆರ್ಮುಗಂ (38) ಶಿಕ್ಷೆಗೆ ಒಳಗಾದವರು.
ತಿಮ್ಮಪ್ಪ ಅಪ್ರಾಪ್ತ ವಯಸ್ಸಿನ ಬಾಲಕರ ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ಸೈಬರ್ ಟಿಪ್‌ಲೈನ್‌ನಿಂದ ಬಂದ ದೂರಿನ ಮೇರೆಗೆ 2020ರ ಜ.12ರಂದು ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಎಫ್‌ಟಿಎಸ್‌ಸಿ-1ರ ನ್ಯಾಯಾಧೀಶೆ ಲತಾ ಅವರು ತಿಮ್ಮಪ್ಪನ ಮೇಲಿನ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.44 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿಯಾಗಿ ಮೂರು ವರ್ಷ ಸಾದಾ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಭದ್ರಾವತಿ ತಾಲೂಕಿನ ಆರ್ಮುಗಂ 10 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಸಂತ್ರಸ್ತೆ ತಾಯಿ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋದಡಿ ಪ್ರಕರಣ ದಾಖಲಿಸಿದ್ದರು. ಅಂದಿನ ತನಿಖಾಧಿಕಾರಿ ಭದ್ರಾವತಿ ಸಿಪಿಐ ಇ.ಒ.ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋ ಪಟ್ಟಿ ಸಲ್ಲಿಸಿದ್ದರು.
ಶುಕ್ರವಾರ ವಿಚಾರಣೆ ಕೈಗೊಂಡ ಎಫ್‌ಟಿಎಸ್‌ಸಿ-2ರ ನ್ಯಾಯಾಧೀಶ ಜೆ.ಎಸ್.ಮೋಹನ್ ಅವರು ಆರ್ಮುಗಂ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಎರಡೂ ಪ್ರಕರಣದಲ್ಲೂ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.