Gavel on desk. Isolated with good copy space. Dramatic lighting. 
ಜಿಲ್ಲೆ

ಅಪರಾಧಿಗೆ 3 ವರ್ಷ ಜೈಲು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ


ಮಂಗಳೂರು: ಸ್ನೇಹದ ಹೆಸರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯಿಂದ ಸುಮಾರು 120.08ಪವನ್ ತೂಕದ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ(ಎಫ್‌ಟಿಎಸ್‌ಸಿ-1) ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 3 ವರ್ಷ ಜೈಲು ಶಿಕ್ಷೆ ಹಾಗೂ 12 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


ಉಳ್ಳಾಲ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್ ನಿವಾಸಿ ರೋಶನ್ ಡಿಸೋಜ ಆಲಿಯಾಸ್ ರೋಶನ್ ಫರ್ನಾಂಡಿಸ್(31) ಶಿಕ್ಷೆಗೊಳಗಾದವನು.


ಪ್ರಕರಣದ ಹಿನ್ನೆಲೆ: ನಗರದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಬಾಲಕಿ 2015ರ ನ.16ರಂದು ಬೆಳಗ್ಗೆ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಬಾಲಿಸಿದ್ದ ರೋಶನ್ ಹಲವು ಬಾರಿ ಆಕೆಯ ಜತೆ ಮಾತನಾಡಲು ಯತ್ನಿಸಿದ್ದ. ತಾನು ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವುದಾಗಿ ಹೇಳಿದ್ದ. ಅಲ್ಲದೆ ಬಾಲಕಿಯ ಮನೆಯವರ ಪರಿಚಯವಿದೆ ಎಂದು ತಿಳಿಸಿದ್ದ. ಈ ರೀತಿ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದ. ಅನಂತರ ಬಾಲಕಿಯನ್ನು ಮಂಗಳೂರಿನ ಹೊಟೇಲ್, ಮಾಲ್‌ಗಳಿಗೆ ಕರೆದುಕೊಂಡು ಹೋಗಿದ್ದ. ಮನೆಯಲ್ಲಿ ತಿಳಿಸಿದರೆ ನಮ್ಮ ನಡುವಿನ ಸ್ನೇಹಕ್ಕೆ ತೊಂದರೆಯಾಗುತ್ತದೆ. ಮನೆಯವರು ಅಡ್ಡಿ ಮಾಡುತ್ತಾರೆ ಎಂದು ಹೇಳಿದ್ದ. ಒಂದು ದಿನ ರೋಶನ್ ತನಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಬಾಲಕಿಯನ್ನು ನಂಬಿಸಿ, 2015ರ ಡಿ.28ರಂದು ಆಕೆಯ ಮನೆಯ ಬಳಿ ಹೋಗಿ ಮನೆಯವರಿಗೆ ಸೇರಿದ ಒಟ್ಟು 86.07 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಅನಂತರ ಮತ್ತೊಂದು ದಿನ ರೋಶನ್ ತಾನು ಈ ಹಿಂದೆ ಪಡೆದುಕೊಂಡಿದ್ದ ಚಿನ್ನಾಭರಣ ಅಡವಿಟ್ಟಿದ್ದು ಅದರ ವಾಯಿದೆ ಮುಗಿಯುತ್ತಿದೆ. ಬಡ್ಡಿ ಕಟ್ಟದಿದ್ದರೆ ಅದನ್ನು ಮಾರಾಟ ಮಾಡುತ್ತಾರೆ. ಅದಕ್ಕೆ ಮತ್ತೆ ಚಿನ್ನಾಭರಣ ಬೇಕಾಗಿದೆ ಎಂದು ಬಾಲಕಿಯನ್ನು ನಂಬಿಸಿದ್ದ.

2016 ಮಾ.12ರಂದು ಬಾಲಕಿಯ ಅಜ್ಜಿಯ ಮನೆಯ ಬಳಿಗೆ ತೆರಳಿ ಬಾಲಕಿಯ ಮೂಲಕ 34.01 ಗ್ರಾಂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. 2016ರ ಮಾ.30ರಂದು ಬೆಳಗ್ಗೆ 11.30ಕ್ಕೆ ಕದ್ರಿಪಾರ್ಕ್‌ಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಂದು ಬಾಲಕಿ ಮನೆಗೆ ತಲುಪುವಾಗ ತಡವಾಗಿದ್ದು ಆ ಬಗ್ಗೆ ಮನೆಯವರು ಪ್ರಶ್ನಿಸಿದ್ದರು. ಆಗ ಬಾಲಕಿ ನಡೆದಿರುವ ವಿಚಾರಗಳನ್ನು ತಿಳಿಸಿದ್ದಾಳೆ.
ಮನೆಯವರು ಅಪರಾಧಿಯ ಬಗ್ಗೆ ವಿಚಾರಿಸಿದಾಗ ಆತ ಸಾಫ್ಟ್‌ವೇರ್ ಇಂಜಿನಿಯರ್ ಆಗಿರಲಿಲ್ಲ, ಬದಲಾಗಿ ಕ್ಯಾಟರಿಂಗ್‌ವೊಂದರಲ್ಲಿ ಸಪ್ಲೈಯರ್ ಆಗಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ಗಳಾದ ಅಶೋಕ್ ಪಿ. ಮತ್ತು ಕೆ.ಆರ್.ಗೋಪಿಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ ಪೋಕ್ಸೊ ಕಲಂ 8ರನ್ವಯ 3 ವರ್ಷ ಸಾದಾ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ, ಪೋಕ್ಸೋ ಕಲಂ 12ರನ್ವಯ ಒಂದು ವರ್ಷ ಸಾದಾ ಸಜೆ, 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆಯ ಕಲಂ 420ರನ್ವಯ 3 ವರ್ಷ ಸಾದಾ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಸಾದಾ ಸಜೆ ವಿಧಿಸಿ, ಸಂತ್ರಸ್ತ ಬಾಲಕಿಗೆ 50,000 ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿ ಸೋಮವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.