ಜಿಲ್ಲೆ

ಅಪ್ರಾಪ್ತೆಯರ ಸಾಮೂಹಿಕ ಅತ್ಯಾಚಾರ ಯತ್ನ : ನಾಲ್ವರು ಆರೋಪಿಗಳ ಬಂಧನ : ಪೋಕ್ಸೋ ಕೇಸ್ ದಾಖಲು

ಸೌಮ್ಯ ಆರ್

ಮೂಡುಬಿದಿರೆ: ನಿಡ್ಡೋಡಿ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರೊಂದಿಗೆ ಇದ್ದ ನಾಲ್ವರು ಯುವಕರ ತಂಡವನ್ನು ಮೂಡುಬಿದಿರೆ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ತಂಡ ಬಂಧಿಸಿದ್ದು, ಈ ಮೂಲಕ ಸಂಭಾವ್ಯ ಸಾಮೂಹಿಕ ಅತ್ಯಾಚಾರ ಕೃತ್ಯವೊಂದನ್ನು ತಪ್ಪಿಸಲಾಗಿದೆ.

ನಿಡ್ಡೋಡಿ ಕಲ್ಲಕುಮೇರಿನ ಮಹೇಶ, ಕಟೀಲಿನ ಯಜ್ಞೇಶ್, ಮೂಲ್ಕಿ ನಡುಗೊಡೆಯ ದಿಲೀಪ್ ಹಾಗೂ ಬಜ್ಪೆ ಕೊಂಡೆಮೂಲೆಯ ಶ್ರೀಕಾಂತ್ ಬಂಧಿತ ಆರೋಪಿಗಳಾಗಿದ್ದು, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸಾಮೂಹಿಕ ಅತ್ಯಾಚಾರಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನುವುದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದೆ. ಅಲ್ಲದೆ, ಸ್ಥಳದಲ್ಲಿ ಲೈಂಗಿಕ ಕ್ರಿಯೆಗೆ ಬಳಸುವ ಕೆಲವು ವಸ್ತುಗಳು ಸಹ ಪತ್ತೆಯಾಗಿವೆ. ಸಂತ್ರಸ್ತ ಬಾಲಕಿಯರು ಮತ್ತು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ, ಘಟನೆಯ ಎಲ್ಲ ವಿವರಗಳನ್ನು ಅವರು ಬಾಯಿಬಿಟ್ಟಿದ್ದಾರೆ.

ಮಾಹಿತಿ ಸಿಕ್ಕ ತಕ್ಷಣವೇ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಮತ್ತು ಅವರ ತಂಡ ಸ್ಥಳಕ್ಕೆ ತಲುಪಿದ ಕಾರಣ, ದೊಡ್ಡ ದುರಂತವನ್ನು ತಪ್ಪಿಸಲು ಸಾಧ್ಯವಾಗಿದೆ.