ಜಿಲ್ಲೆ

ವಿಕ್ಟೋರಿಯಾದಲ್ಲಿದ್ದ ಖಾಸಗಿ ಲ್ಯಾಬ್ ಬಂದ್: ರೋಗಿಗಳ ಪರದಾಟ

ಪಂಕಜ ಕೆ.ಎಂ.

ಪಂಕಜ ಕೆ.ಎಂ. ಬೆಂಗಳೂರು

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧೀನದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಕಟ್ಟಡದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಇಂಡಿಯಾ (ಎಂಐಎಸ್‌ಐ) ಲ್ಯಾಬೊರೇಟರಿ ಹಲವು ದಿನಗಳಿಂದ ಬಾಗಿಲು ಮುಚ್ಚಿದ್ದು, ಕಡಿಮೆ ದರದಲ್ಲಿ ಸಿಗುತ್ತಿದ್ದ ಸೇವೆ ದಿಢೀರ್ ಸ್ಥಗಿತಗೊಂಡಿದ್ದರಿಂದ ಪರೀಕ್ಷೆಗೆ ರೋಗಿಗಳು ಪರದಾಡುವಂತಾಗಿದೆ.

2016ರಲ್ಲಿ ಹಲವು ವಿವಾದಗಳೊಂದಿಗೆ ಆರಂಭವಾದ ಪ್ರಯೋಗಾಲಯವು ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಅತಿ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿತ್ತು. ಎಂಆರ್‌ಐ, ಅಲ್ಟ್ರಾ ಸೌಂಡ್ ಸ್ಕ್ರೀನಿಂಗ್, ಸಿಟಿ ಸ್ಕಾೃನ್, ಎಕ್ಸ್‌ರೇ, ರಕ್ತ, ಮೂತ್ರ, ಕ ಸೇರಿ ಹಲವು ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿತ್ತು. ವಿಕ್ಟೋರಿಯಾ, ವಾಣಿವಿಲಾಸ, ನೆ್ರೆೆ ಯುರಾಲಜಿ ಸಂಸ್ಥೆ, ಪಿಎಂಎಸ್‌ಎಸ್‌ವೈ, ಮಿಂಟೊದಿಂದ ಮಾತ್ರವಲ್ಲದೆ ಕಡಿಮೆ ದರ ಎಂಬ ಕಾರಣಕ್ಕೆ ಹೊರಗಿನಿಂದಲೂ ರೋಗಿಗಳು ಇಲ್ಲಿ ಪರೀಕ್ಷೆಗೆ ಬರುತ್ತಿದ್ದರು.

ಪ್ರಯೋಗಾಲಯ ಮುಚ್ಚಿರುವುದರಿಂದ ನೂರಾರು ರೋಗಿಗಳಿಗೆ ಸಮಸ್ಯೆಯಾಗಿದೆ. ಎಲ್ಲ ರೋಗಿಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಇನ್‌ಫೋಸಿಸ್ ಲ್ಯಾಬ್ ಹಾಗೂ ಆಸ್ಪತ್ರೆಯ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ದಟ್ಟಣೆ ಹೆಚ್ಚಾಗಿದ್ದು, ರೋಗಿಗಳು ಪರೀಕ್ಷೆ ಹಾಗೂ ವರದಿಗಾಗಿ ದಿನಗಟ್ಟಲೆ ಕಾಯುವ ಹಾಗೂ ತುರ್ತು ಅಗತ್ಯ ಇರುವವರು ಹೊರಗೆ ಖಾಸಗಿಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವ ಸ್ಥಿತಿ ಎದುರಾಗಿದೆ.

ಆಸ್ಪತ್ರೆಯಿಂದಲೇ ಪ್ರಯೋಗಾಲಯ: ಆಸ್ಪತ್ರೆಯು ಎಂಐಎಸ್‌ಐ ಜತಗೆ ನಿಯಮಾನುಸಾರ ಏಳು ವರ್ಷಗಳಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಅವಧಿ ಪೂರ್ಣಗೊಂಡ ಬಳಿಕ ರೋಗಿಗಳಿಗೆ ತೊಂದರೆ ಆಗಬಾರದೆಂದು ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಬಳಿಕ ಆಸ್ಪತ್ರೆಯು ಬೇರೆ ಕಂಪನಿಗೆ ಟೆಂಡರ್ ಕರೆಯಲು ಮುಂದಾಗಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರಯೋಗಾಲಯ ತೆರೆಯಲು ಖಾಸಗಿಯವರಿಗೆ ಅವಕಾಶ ನೀಡುವಂತಿಲ್ಲ. ಇದು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ನಿಯಮಕ್ಕೆ ವಿರುದ್ಧವಾಗಿದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಕಾರಣಕ್ಕೆ ಟೆಂಡರ್ ಯೋಚನೆ ಕೈಬಿಟ್ಟಿರುವ ಸರ್ಕಾರ, ಆಸ್ಪತ್ರೆಯಿಂದಲೇ ಪ್ರಯೋಗಾಲಯ ನಡೆಸುವ ಕುರಿತು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲೇ ವಿರೋಧ: 2016ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಿರಿಯ ಪುತ್ರನ ಸಹ-ಮಾಲೀಕತ್ವದ ಎಂಐಎಸ್‌ಐ ಪ್ರಯೋಗಾಲಯ ಆರಂಭಿಸಲಾಯಿತು. ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಯತೀಂದ್ರ ಸಿದ್ದರಾಮಯ್ಯ ಕಂಪನಿಯಿಂದ ಹೊರ ನಡೆದಿದ್ದರು. ಆಗ ಎಲ್ಲ ವಿರೋಧಗಳ ನಡುವೆಯೂ ಪಿಎಂಎಸ್‌ಎಸ್‌ವೈ ಆಸ್ಪತ್ರೆ ಮ್ಯಾಟ್ರಿಕ್ಸ್‌ನೊಂದಿಗೆ ತನ್ನ ಒಡಂಬಡಿಕೆ ಮಾಡಿಕೊಂಡಿತು. ಪ್ರಯೋಗಾಲಯ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ರೋಗಿಗಳು ಸೇವೆ ಪಡೆಯಲು ಆರಂಭಿಸಿದರು. ಇದೀಗ ಪ್ರಯೋಗಾಲಯ ಮುಚ್ಚಿದ್ದು, ಸರ್ಕಾರದ ಮುಂದಿನ ನಡೆ ಏನೆಂಬುದರ ಬಗ್ಗೆ ತಿಳಿಯಲು ವೈದ್ಯರು, ವಿದ್ಯಾರ್ಥಿಗಳು, ರೋಗಿಗಳು ಕುತುಹಲದಿಂದ ಕಾಯುತ್ತಿದ್ದಾರೆ.