ಜಿಲ್ಲೆ

ಮಂಗಳೂರು ಆಕಾಶವಾಣಿ ಉದ್ಘೋಷಕರಿಗೆ ಪಿಎಂ ಕಚೇರಿ ಕರೆ

Dakshina Kannada

ಮಂಗಳೂರು: ಆಕಾಶವಾಣಿ ಮಂಗಳೂರು ಕಚೇರಿ ಉದ್ಘೋಷಕರ ಮೊಬೈಲ್ ದೂರವಾಣಿಗೆ ಪ್ರಧಾನಿ ಕಾರ್ಯಾಲಯ ಸೋಮವಾರ ಕರೆ ಬಂದಿದೆ.

ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಘೋಷಕರು ಹಾಗೂ ಕಾರ್ಯಕ್ರಮ ನಿರ್ಮಾಣ ಸಹಾಯಕರು ತಮ್ಮ ವೃತ್ತಿ ಕ್ಷೇತ್ರದ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸೋಮವಾರ ಮೊಬೈಲ್ ದೂರವಾಣಿಗೆ ಕರೆ ಮಾಡಿ ಸಮಸ್ಯೆಗಳನ್ನು ಆಲಿಸಿದ್ದಾರೆ.

ಆಕಾಶವಾಣಿಯಲ್ಲಿ ಕಾಯಂ ನೌಕರರ ಕೊರತೆಯಿದೆ. ಹಿರಿಯ ಅಧಿಕಾರಿಗಳು ನಿವೃತ್ತಿಯ ಆಸುಪಾಸಿನಲ್ಲಿದ್ದಾರೆ. ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗದಲ್ಲಿರುವ ಉದ್ಘೋಷಕರು ಮತ್ತು ಕಾರ್ಯಕ್ರಮ ನಿರ್ಮಾಣ ಸಹಾಯಕರು ಕನಿಷ್ಟ ಗೌರವಧನವನ್ನಷ್ಟೇ ಪಡೆಯುತ್ತಿದ್ದು, ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಲಾಕ್‌ಡೌನ್ ಸಂದರ್ಭ ಕನಿಷ್ಠ ವೇತನವೂ ಸಿಗಲಿಲ್ಲ.

ಮಂಗಳೂರು ಆಕಾಶವಾಣಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಕ್ರಮ ನಿರ್ಮಾಣ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಕ್ಷತಾರಾಜ್ ಪೆರ್ಲ, ರಶ್ಮಿ ರೈ, ವಿಜಯಾ ಕಿಶೋರ್ ಆಕಾಶವಾಣಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ದುಡಿಯುತ್ತಿರುವ ಎಲ್ಲರ ಪರವಾಗಿ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ವಿಸ್ತೃತ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಭರವಸೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.