ಜಿಲ್ಲೆ

ಜಿಲ್ಲೆಯಲ್ಲಿ 2 ಸಾವಿರ ಅಕ್ಕಸಾಲಿಗರಿಗೆ ಕೌಶಲ್ಯ ತರಬೇತಿ ಗುರಿ

ಉಡುಪಿ: ಪಿಎಂ ವಿಶ್ವಕರ್ಮ ಯೋಜನೆಯಲ್ಲಿ 18 ವೃತ್ತಿಗಳನ್ನು ಆಯ್ಕೆಮಾಡಿಕೊಂಡಿದ್ದು, ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಅಕ್ಕಸಾಲಿಗರಿಗೆ ಚಿನ್ನಾಭರಣ ತಯಾರಿಕೆ ಕೌಶಲ್ಯಗಳನ್ನು ಕಲಿಸುವ ಗುರಿ ಹೊಂದಲಾಗಿದೆ. ಈಗಾಗಲೇ 304 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಶುಕ್ರವಾರ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಜೆಮ್ಸ್​ ಆ್ಯಂಡ್​ ಜುವೆಲ್ಲರಿ ಸಂಸ್ಥೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳ ಮೊದಲ ಹಂತದ ತರಬೇತಿಯನ್ನು ಉದ್ಘಾಟಿಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಆಭರಣ ತಯಾರಕೆ ಮತ್ತು ಮಾರಾಟ ವೃತ್ತಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯೋಜನೆ ಪ್ರಯೋಜನ ಪಡೆಯಬೇಕು. ಸಣ್ಣ ಉದ್ದಿಮೆಗಳನ್ನು ನಡೆಸುವವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಈ ಮೂಲಕ ಹೆಚ್ಚಿನ ಉದ್ಯೋಗ ಸೃಜಿಸುವುದು ಯೋಜನೆ ಉದ್ದೇಶ ಎಂದರು.

ವಿದ್ಯಾರ್ಥಿಗಳಿಗೆ ತರಬೇತಿ
ಹೆಣ್ಮಕ್ಕಳಲ್ಲಿ ವೃತ್ತಿ ನೈಪುಣ್ಯತೆ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯ ಮೂಲಕ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ವಾಸ್ತವ್ಯದಲ್ಲಿರುವ 40 ವಿದ್ಯಾರ್ಥಿನಿಯರಿಗೆ ಕಾಲೇಜು ಮುಗಿದ ಬಳಿಕ 4 ರಿಂದ 6 ಗಂಟೆವರೆಗೆ 1 ತಿಂಗಳ ತರಬೇತಿ ನೀಡಲಾಗಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್​ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಆಯ್ಕೆಯಾದ 30 ಮಂದಿಗೆ ಮೊದಲ ಹಂತದ ಆಭರಣ ತಯಾರಿಕೆಯ ಬಗ್ಗೆ ಪ್ರತಿ ದಿನ 500 ಶಿಷ್ಯವೇತನದೊಂದಿಗೆ 6 ದಿನದ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಬಳಿಕ 15 ಸಾವಿರ ರೂ. ಮೌಲ್ಯದ ಟೂಲ್​ ಕಿಟ್​ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು. ಅಗತ್ಯವಿದ್ದವರಿಗೆ ಬ್ಯಾಂಕ್​ ಮೂಲಕ 1 ಲಕ್ಷ ರೂ. ಸಾಲ ಸೌಲಭ್ಯವೂ ಲಭಿಸಲಿದೆ ಎಂದರು.

ಜಿಜೆಇಪಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ್​, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದಿಪ್​ ಡಿಸೋಜಾ, ಬ್ರಾಂಚ್​ ಹೆಡ್​ ಕೌಶಿಕ್​ ಎಸ್​.ವಿ. ಮೊದಲಾದವರು ಉಪಸ್ಥಿತರಿದ್ದರು. ಸಿದ್ಧಿ ಎಸ್​. ರಾವ್​ ಕಾರ್ಯಕ್ರಮ ನಿರೂಪಿಸಿ, ಮಿಶಲ್​ ವಂದಿಸಿದರು.