ಮೈಸೂರು: ಅಧಿಕಾರಾವಧಿ ಇನ್ನೂ ಒಂದೂವರೆ ವರ್ಷ ಇರುವಾಗಲೇ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಪಿ.ಎಂ.ಪ್ರಸನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ ರಾಜೀನಾಮೆ ನೀಡಲು ಪಶು ಸಂಗೋಪನಾ ಸಚಿವರು ಕೊಡುತ್ತಿರುವ ತೊಂದರೆ ಕಾರಣ ಎಂದು ದೂರಿದ್ದಾರೆ.
ವೆಂಕಟೇಶ್ ಅವರು ಸಚಿವ ಆದಾಗಿನಿಂದಲೂ ಹೆಜ್ಜೆ ಹೆಜ್ಜೆಗೂ ಕಿರುಕುಳ ನೀಡುತ್ತಿದ್ದಾರೆ. ದಬ್ಬಾಳಿಕೆ ಮಾಡುತ್ತಲೇ ಇದ್ದಾರೆ. ಅವರಿಗೆ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶವಿಲ್ಲ. ನಮಗೆ ತೊಂದರೆ ಕೊಡುವುದನ್ನೇ ಆದ್ಯತೆಯಾಗಿ ಇಟ್ಟುಕೊಂಡಿದ್ದಾರೆ. ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ನಾನು ಜೆಡಿಎಸ್ ಪಕ್ಷದವನು ಎನ್ನುವುದಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೇವಲ ಆರು ತಿಂಗಳಲ್ಲಿ ನನಗೆ 26 ಬಾರಿ ನೋಟಿಸ್ ಕೊಡಿಸಿದ್ದಾರೆ. ಉತ್ತರಿಸಲೂ ಅವಕಾಶ ಕೊಡದೆ, ಪದೇ ಪದೇ ನೋಟಿಸ್ ಜಾರಿಗೊಳಿಸುತ್ತಿದ್ದಾರೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವುದೇ ಅವರ ಉದ್ದೇಶವಾಗಿತ್ತು. ಅವರ ವಿರುದ್ಧ ನನ್ನ ಹೋರಾಟ ಮುಂದುವರಿಸುತ್ತೇನೆ. ನನ್ನ ಕಾರಣದಿಂದಾಗಿ ರೈತರ ಸಂಸ್ಥೆಗೆ ತೊಂದರೆ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಒಕ್ಕೂಟಕ್ಕೆ ಹೊಸದಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲಾಗಿದೆ. ಇದನ್ನು ನಮ್ಮ ಗಮನಕ್ಕೆ ತಂದೇ ಇಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೆಲಸ ಮಾಡಲು ಸಾಧ್ಯವಾಗುವುದೇ? ಎಂದಿದ್ದಾರೆ.
ನಮ್ಮ ಅವಧಿಯಲ್ಲಿ ಹಾಲಿಗೆ ಒಳ್ಳೆಯ ಬೆಲೆ ನೀಡಿದ್ದೇವೆ. ಉತ್ತಮ ಯೋಜನೆಗಳನ್ನು ರೂಪಿಸಿದ್ದೇವೆ. ರೈತರಿಗೆ ಒಳ್ಳೊಳ್ಳೆ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಇದನ್ನು ಸಹಿಸಿಕೊಳ್ಳಲು ಪಶುಸಂಗೋಪನಾ ಸಚಿವರಿಗೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸ್ವಗ್ರಾಮ ಕಗ್ಗುಂಡಿ ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯತ್ವ ಹೊಂದಿದ್ದೇನೆ. ಆದರೂ ವಾಸಸ್ಥಳ ದೃಢೀಕರಣಕ್ಕೆ ಸಂಬಂಧಿಸಿದಂತೆಯೂ ನೋಟಿಸ್ ಕೊಡಲಾಗಿದೆ ಎಂದು ಪ್ರಸನ್ನ ದೂರಿದ್ದಾರೆ.
ಅವರು ಮಾಡಿರುವ ಪುಣ್ಯದ ಕೆಲಸಗಳ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಅದನ್ನು ಸಂಬಂಧಿಸಿದ ಇಲಾಖೆ ಕೊಟ್ಟಿದೆ. ನೋಟಿಸ್‌ಗಳನ್ನು ನಾನು ಕೊಡಲಾಗುತ್ತದೆಯೇ? ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಯಾರಾದರೂ ಸುಮ್ಮನೆ ನೋಟಿಸ್ ಜಾರಿಗೊಳಿಸುತ್ತಾರೆಯೇ?ಕೆ.ವೆಂಕಟೇಶ್, ಪಶು ಸಂಗೋಪನಾ ಸಚಿವ