ಜಿಲ್ಲೆ

ಪ್ರಧಾನಿ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಪ್ರಯುಕ್ತ ವಿವಿಧ ಸಂಘ ಸಂಸ್ಥೆ ಸಹಕಾರದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರೆಡ್‌ಕ್ರಾಸ್ ಸಂಸ್ಥೆಯಿಂದ ಶನಿವಾರ ರೆಡ್ ಕ್ರಾಸ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಶಿಬಿರಕ್ಕೆ ಚಾಲನೆ ನೀಡಿದರು.

ಸೆ.೧೭ ರಿಂದ ಅಕ್ಟೋಬರ್ ೨ ರ ಗಾಂಧಿ ಜಯಂತಿವರೆಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಜನಸೇವೆ ಮೂಲಕ ಸಮಾಜ ಸೇವೆ ಮಾಡಬೇಕು ಎಂಬುದು ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದು ಕೆ.ಜಿ. ಬೋಪಯ್ಯ ಹೇಳಿದರು.

ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸುವಂತಾಗಬೇಕು. ಪ್ರತಿಯೊಬ್ಬರ ಜೀವಕ್ಕೆ ರಕ್ತದಾನ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ರಕ್ತದಾನ ಮಾಡುವಂತಾಗಬೇಕು. ರಕ್ತದಾನ ಮಾಡುವುದರಿಂದ ಯಾವುದೇ ರೀತಿ ಸಮಸ್ಯೆ ಇರುವುದಿಲ್ಲ ಎಂದುರು.

ನರೇಂದ್ರ ಮೋದಿ ಅವರು ಇಡೀ ವಿಶ್ವ ಗಮನಿಸುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿ ಗೊಳಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಸಲಹೆ ಮಾಡುವ ಮಟ್ಟಕ್ಕೆ ಭಾರತ ಹೆಜ್ಜೆ ಹಾಕಿದೆ ಎಂದು ಕೆ.ಜಿ.ಬೋಪಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ರಕ್ತದಾನ ಶಿಬಿರಕ್ಕೆ ಎಲ್ಲರೂ ಕೈಜೋಡಿಸುವಂತಾಗಬೇಕೆಂದು ಮನವಿ ಮಾಡಿದರು. ಸರ್ಕಾರ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆ ಹೊಗಲಾಡಿಸಲು ಶ್ರಮಿ
ಸುತ್ತಿದೆ. ಯಾರೂ ಸಹ ಅಪೌಷ್ಟಿಕತೆಗೆ ತುತ್ತಾಗಬಾರದೆಂದರು.

ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ರವೀಂದ್ರ ರೈ ಮಾತನಾಡಿ, ಯುವಜನರು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದಿಂದ ಹಲವರ ಜೀವ ಉಳಿಸಬಹುದೆಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಮಾತನಾಡಿ, ಕ್ಷಯರೋಗವನ್ನು ೨೦೨೫ ರೊಳಗೆ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕೆಂದರು.

ಅಪೌಷ್ಟಿಕತೆ ಉಂಟಾಗಿರುವವರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಕಿಟ್ ಅನ್ನು ಶಾಸಕ ಕೆ.ಜಿ.ಬೋಪಯ್ಯ ವಿತರಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮುರಳೀಧರ, ಉಪಾಧ್ಯಕ್ಷ ಎಚ್.ಟಿ. ಅನಿಲ್, ರಕ್ತನಿಧಿ ಕೇಂದ್ರದ ಸುನಿತಾ, ಕಮಲ ಮತ್ತಿತರರು ಇದ್ದರು.