ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ನಿರಂತರ ಉತ್ಪಾದನಾ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುವ ಮೂಲಕ ನಾವು ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ಗೌರವ ಸಮರ್ಪಣೆ ಮಾಡಬೇಕು ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.
ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಸಂಘದಿಂದ ಜನ್ನಾಪುರದ ಶ್ರೀ ಮಲ್ಲೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನ.4 ಮತ್ತು 5ರಂದು ಕಾರ್ಖಾನೆಯ ಶತಮಾನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸುವ ಯೋಜನೆಯಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಮಂತ್ರಿಗಳನ್ನು ಕರೆಸುವ ಪ್ರಯತ್ನ ನಡೆದಿದೆ. ಈ ಕಾರ್ಖಾನೆಯನ್ನು ನಾವೆಲ್ಲರೂ ಸೇರಿ ಉಳಿಸಿ, ಬೆಳೆಸುವ ಕಾರ್ಯ ಮಾಡೋಣ ಎಂದರು.
ಸನ್ಮಾನ ಸ್ವೀಕರಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವಿಐಎಸ್‌ಎಲ್ ಅಭಿವೃದ್ಧಿ ವಿಚಾರದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವ ನನ್ನ ಕೆಲಸ ನನಗೆ ತೃಪ್ತಿ ತಂದಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು ಕಟ್ಟಿದ ಈ ಕಾರ್ಖಾನೆ ಉಳಿಯಬೇಕಾಗಿದೆ. ವಿಜ್ಞಾನ ಇಂದು ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಇದಕ್ಕೆ ಕಾರಣ ಇಂಜಿನಿಯರ್‌ಗಳ ಪ್ರಯತ್ನ. ನಿಮ್ಮೆಲ್ಲರ ಸಹಕಾರ, ಸಲಹೆ ಮೇರೆಗೆ ಈ ಕಾರ್ಖಾನೆಯನ್ನು ಉಳಿಸಿ, ಬೆಳೆಸುವ ಸರ್ವರೀತಿಯ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.
ಶಾಸಕ ಬಿ.ಕೆ.ಸಂಗಮೆಶ್ವರ್ ಮಾತನಾಡಿ, ಕಾರ್ಖಾನೆಯ ಶತಮಾನೋತ್ಸವ ಸಮಾರಂಭದ ಯಶಸ್ಸಿಗೆ ನಾವೆಲ್ಲರೂ ಸಹಕರಿಸುತ್ತೇವೆ. ಈ ಕಾರ್ಖಾನೆ ಉಳಿಯಬೇಕು. ಇಲ್ಲಿ ಕಾರ್ಮಿಕ ವರ್ಗಕ್ಕೆ ಕೆಲಸ ಸಿಗುವಂತಾಗಿ ಕಾರ್ಮಿಕರ ಬದುಕು ಹಸನಾಗಬೇಕು ಎಂದರು.
ಸಂಘದ ಗೌರವಾಧ್ಯಕ್ಷರಾದ ನಾಗಭೂಷಣ್, ಎ.ಪಿ.ಕುಮಾರ್, ನಿವೃತ್ತ ಅಧಿಕಾರಿ ಎನ್.ಟಿ.ಕೃಷ್ಣಪ್ಪ, ಉದ್ಯಮಿ ಜಗನ್ನಾಥ್, ಪ್ರಮುಖರಾದ ಬಸವರಾಜ್, ಮಂಜುನಾಥ್, ಶಂಕರ್, ನಾಗರಾಜ್, ಟಾಕಪ್ಪ, ನರಸಿಂಹಾಚಾರ್, ರಾಮಪ್ಪ ಇತರರಿದ್ದರು.