ಹಾನಗಲ್ಲ: ಪ್ರತಿವರ್ಷ 52 ಸಾವಿರ ಕೋಟಿ ವ್ಯಯವಾಗುವ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರು, ಮಧ್ಯಮ ವರ್ಗಗಳ ಸಂಕಷ್ಟಕ್ಕೆ ಸ್ಪಂದಿಸಿದ ದೇಶದ ಏಕೈಕ ಸರ್ಕಾರ ಎಂದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಅಕ್ಕಿಆಲೂರಿನ ಗ್ರಾಪಂ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜ್ಞಾನೋದಯವಾಗಿದೆ. ಈಗ ಗ್ಯಾಸ್ ಸಿಲಿಂಡರ್ ಬೆಲೆ ರೂ. 200 ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದರು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ಆಶ್ವಾಸನೆ ನೀಡಿತ್ತು. ಅದನ್ನು ಈಗ ಈಡೇರಿಸಿ ನುಡಿದಂತೆ ನಡೆದು ಕೊಟ್ಟು ಮಾತು ಉಳಿಸಿಕೊಂಡಿದೆ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಮಳೆ-ಬೆಳೆ ಇಲ್ಲದೇ ಕಳೆದ ಏಳೆಂಟು ವರ್ಷಗಳಿಂದ ರೈತರು, ಬಡವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿರುವ ಜನಸಾಮಾನ್ಯರ ಕಣ್ಣೀರು ಒರೆಸಲು ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ ಎಂದರು.
ಗ್ರಾಪಂ ಅಧ್ಯಕ್ಷ ಮಕ್ಬೂಲ್ ರುಸ್ತುಂಖಾನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ತಹಸೀಲ್ದಾರ್ ರವಿಕುಮಾರ ಕೊರವರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮುಖಂಡರಾದ ಆನಂದ ಗಡ್ಡದ್ದೇವರಮಠ, ಯಾಸೀರಖಾನ ಪಠಾಣ, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ಲಕ್ಷ್ಮಣ ಶೇಷಗಿರಿ, ಸದಾಶಿವ ಬೆಲ್ಲದ, ಮೆಹಬೂಬ್ಅಲಿ ಬ್ಯಾಡಗಿ, ಶಾಂತಕ್ಕ ಅಂಗಡಿ, ರಜಿಯಾಬೇಗಂ ಹಿತ್ತಲಮನಿ, ಸತ್ತಾರಸಾರ ಅರಳೇಶ್ವರ, ಖ್ವಾಜಾಮೊಹಿದ್ದೀನ ಅಣ್ಣಿಗೇರಿ, ಗ್ರಾಪಂ ಸದಸ್ಯರು ಇದ್ದರು.