ಜಿಲ್ಲೆ

ಬಹುತ್ವ ಸಂಸ್ಕೃತಿ ಮತ್ತು ಭಾಷೆ ಉಳಿಸಿ ಬೆಳೆಸುವಂತಾಗಬೇಕು: ತಾಳ್ತಜೆ ವಸಂತ ಕುಮಾರ್


ಮಡಿಕೇರಿ: ಆಧುನಿಕತೆಯಲ್ಲಿ ಬಹುತ್ವ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರತಂದಿರುವ ’ಅರೆಭಾಷೆ ಪದಕೋಶ’ ಹೊತ್ತಿಗೆಯು ಮುಂದಿನ ಜನಾಂಗಕ್ಕೆ ಉಪಯುಕ್ತವಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಲಾಗಿರುವ ಅರೆಭಾಷೆ ಪದಕೋಶ(ಅರೆಭಾಷೆ-ಕನ್ನಡ-ಇಂಗ್ಲೀಷ್) ಪುಸ್ತಕವನ್ನು ನಗರದ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭತ್ತದ ರಾಶಿಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಭಾರತವು ಭಾಷಾ ವೈವಿದ್ಯತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಹಲವು ಪ್ರಾಂತ್ಯ, ಪ್ರದೇಶಗಳ ವೈವಿದ್ಯತೆಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾಷೆ ಉಳಿದಲ್ಲಿ ಜನಾಂಗವು ಸಹ ಉಳಿಯಲು ಸಾಧ್ಯ ಎಂದರು.


ಕನ್ನಡ ಉಪ ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಸಹ ಅಕಾಡೆಮಿ ಮೂಲಕ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಮೂಲಕ ಪದಕೋಶವನ್ನು ಹೊರತಂದಿರುವುದು ಶ್ಲಾಘನಿಯ. ಅಪೂರ್ವ ಕೃತಿಗಳು, ಭಾಷಾ ಉಲ್ಲೇಖಗಳು, ಐತಿಹಾಸಿಕ ದಾಖಲೆಗಳು, ಅರೆಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.


’ಕನ್ನಡ ಉಪ ಭಾಷೆಗಳು ಕೂಡ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಆದ್ದರಿಂದ ಸಾಂಸ್ಕೃತಿಕ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆಚರಣೆ, ಆರಾಧನೆ, ಭಾವನೆಗಳು ವಿಭಿನ್ನವಾಗಿದ್ದರೂ ಸಹ, ಮೂಲ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕಿದೆ ಎಂದು ತಾಳ್ತಜೆ ವಸಂತ ಕುಮಾರ್ ಹೇಳಿದರು.


ಅರೆಭಾಷೆ ಪದಕೋಶದಲ್ಲಿ ಪ್ರಮುಖವಾಗಿ ಸ್ಥಳ ನಾಮದ ವಿಶೇಷತೆ ಕಾಣಬಹುದಾಗಿದೆ. ಪದಕೋಶ ಸಂಗ್ರಹವು ನಿರಂತರವಾಗಿ ನಡೆಯಬೇಕು. ಹಾಗೆ ಆದಲ್ಲಿ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಅಕಾಡೆಮಿ ಕೆಲಸಗಳು ದಾಖಲೆ ಮೂಲಕ ಮಾತನಾಡುತ್ತಿವೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳನ್ನು ಹೊರತಂದಿರುವುದು ಮೆಚ್ಚುವಂತದ್ದು ಎಂದು ವಿಶ್ರಾಂತ ಪ್ರಾಧ್ಯಾಪಕರು ಹೇಳಿದರು.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ಮೂಲಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶವು ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.


ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉಳಿಯಬೇಕಾದರೆ ದಾಖಲೆಗಳು ಅಗತ್ಯ. ಆ ನಿಟ್ಟಿನಲ್ಲಿ ಅಕಾಡಮಿ ವತಿಯಿಂದ ಹಲವು ಪ್ರಮುಖ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ಲಾಘನೀಯ. ಅರೆಭಾಷೆ ಪದಕೋಶ ಕಾರ್ಯವು ಮಹತ್ತರವಾಗಿದೆ. ಮಕ್ಕಳಿಗೆ ಅರೆಭಾಷೆಯನ್ನು ಕಲಿಸಬೇಕು. ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮಾತೃಭಾಷೆಯನ್ನು ಮರೆಯಬಾರದು ಎಂದರು.


ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಅಕಾಡೆಮಿ ಸದಸ್ಯರು ಉದ್ಯೋಗದಲ್ಲಿದ್ದು ಅರೆಭಾಷೆ ಪದಕೋಶ ಹೊರತಂದಿದ್ದಾರೆ. ಅರೆಭಾಷೆಯಲ್ಲಿ ಇದೊಂದು ಮಹತ್ತರ ದಾಖಲೆ ಆಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶ ಮತ್ತು ಪಾರಂಪರಿಕ ವಸ್ತುಕೋಶವನ್ನು ಪ್ರತಿ ಮನೆಯಲ್ಲೂ ಜತನ ಮಾಡಿ ಮಕ್ಕಳಿಗೆ ಓದುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.


ಈ ಸಂದರ್ಭದಲ್ಲಿ ಅರೆಭಾಷೆ ಪದಕೋಶ ಸಂಗ್ರಹಿಸುವಲ್ಲಿ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೆಂಜನ ಮಮತ ಪ್ರಸಾದ್, ಎಂ.ಜಿ.ಜೀವನ್, ಸುನಿಲ್ ಕುಮಾರ್ ಬಿ.ಬಿ., ಚೈತ್ರ ಪಿ., ರುಚಿತಾ ಎ.ಎಸ್., ಕೋಟೇರ ಶೃತಿ ಕಿಶೋರ್, ದರ್ಶಿನಿ, ಡೀನಾ ಜಿ.ಕೆ. ಗೂಡಂಜಿ ಮನೆ ಇವರಿಗೆ ನೆನಪಿನ ಕಾಣಿಕೆ, ಶಾಲೂ, ಪುಸ್ತಕ ನೀಡಿ ಸನ್ಮಾನಿಸಲಾಯಿತು. ಅರೆಭಾಷೆ ಪದಕೋಶ ಕರಡು ಪ್ರತಿ ತಿದ್ದುವ ಕಾರ್ಯ ಮಾಡಿದ ಬಾರಿಯಂಡ ಜೋಯಪ್ಪ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕ ರಾಜೇಶ್ ತೇನನ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಕುಂಜಿಲನ ಮುತ್ತಮ್ಮ, ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅಕಾಡೆಮಿ ಹಿಂದಿನ ಅರ್ಥ ಸದಸ್ಯ ಕೆ.ಟಿ.ದರ್ಶನಾ, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅರೆಭಾಷೆ ಅಕಾಡೆಮಿ ಸದಸ್ಯರಿದ್ದರು.