ಜಿಲ್ಲೆ

ಮಾಲೀಕರಿಗೆ 116 ಮೊಬೈಲ್‌ಗಳ ಹಸ್ತಾಂತರ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕದ್ದಿದ್ದ ಮತ್ತು ಕಳೆದುಹೋಗಿದ್ದ 116 ಮೊಬೈಲ್‌ಗಳನ್ನು ಸಿಇಎನ್‌ ಅಪರಾಧ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.

ನಗರ ಪೊಲೀಸ್ ಕಮಿಷನರ್‌ ಭೂಷಣ ಬೊರಸೆ ಅವರು, ಬುಧವಾರ ಸಾಂಕೇತಿಕವಾಗಿ 10 ಮಾಲೀಕರಿಗೆ ಮೊಬೈಲ್‌ ಹಸ್ತಾಂತರಿಸಿದರು.

‘ಮಾರ್ಚ್‌ 1ರಿಂದ ಈವರೆಗಿನ ಅವಧಿಯಲ್ಲಿ ಕದ್ದ ಮತ್ತು ಕಳೆದುಹೋಗಿದ್ದ 116 ಮೊಬೈಲ್‌ ವಶಕ್ಕೆ ಪಡೆದು, ಮಾಲೀಕರಿಗೆ ಹಿಂತಿರುಗಿಸುತ್ತಿದ್ದೇವೆ. ಸಾರ್ವಜನಿಕರು ಮೊಬೈಲ್‌ ಕಳೆದಾಗ ಅಥವಾ ಕಳುವಾದಾಗ, ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆ, ಇ–ಲಾಸ್‌ ಪೋರ್ಟಲ್‌ ಅಥವಾ ಸಿಐಐಆರ್‌(ಸೆಂಟ್ರಲ್‌ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್‌) ಆ್ಯಪ್‌ನಲ್ಲಿ ದೂರು ದಾಖಲಿಸಬೇಕು. ಮೊಬೈಲ್‌ ಖರೀದಿಸಿದ ಬಿಲ್‌, ಗುರುತಿನ ಚೀಟಿ ಅಪ್‌ಲೋಡ್‌ ಮಾಡಬೇಕು. ಪೊಲೀಸರು ಮೊಬೈಲ್‌ ಪತ್ತೆ ಮಾಡಿದ ನಂತರ ನಿಮಗೆ ಸಂದೇಶ ಬರುತ್ತದೆ. ನಂತರ ಠಾಣೆಗೆ ತೆರಳಿ ಮೊಬೈಲ್‌ ಪಡೆಯಬಹುದು’ ಎಂದರು.