ಜಿಲ್ಲೆ

ಹೋದಿರಾಯನಹಳ್ಳದ ಕಾಮಗಾರಿ ಕಳಪೆ

Chikkamagaluru

ತರೀಕೆರೆ: ಸತತ ಐದು ದಶಕಗಳ ಕಾಲ ನನೆಗುದಿಗೆ ಬಿದ್ದ ಬಳಿಕ ಅನುಷ್ಠಾನಗೊಂಡಿದ್ದ ಹೋದಿರಾಯನಹಳ್ಳ ಪಥ ಪರಿವರ್ತನಾ ಯೋಜನೆ ಕಾಮಗಾರಿ ಭಾಗಶಃ ಪೂರ್ಣಗೊಂಡ ಒಂದು ವರ್ಷದ ಅವಧಿಯಲ್ಲೇ ಹಳ್ಳ ಹಿಡಿದಿದೆ. ಕಳಪೆ ಕಾಮಗಾರಿಯಿಂದಾಗಿ ನಾಲೆ ಒಡೆದು ನೀರು ಪೋಲಾಗುತ್ತಿದೆ.

61 ಕೋಟಿ ರೂ. ವೆಚ್ಚದ ಹೋದಿರಾಯನಹಳ್ಳ ಯೋಜನೆ ಸಂಪೂರ್ಣ ಕಳಪೆಯಾಗಿದೆ. ಹೋದಿರಾಯನ ಹಳ್ಳದಿಂದ ಜಂಬದಹಳ್ಳ ಜಲಾಶಯಕ್ಕೆ ಸರಾಗವಾಗಿ ಹರಿದು ಬಂದು ಸಂಗ್ರಹವಾಗಬೇಕಿದ್ದ ನೀರು ಆಗಾಗ ಕಾಲುವೆ ಒಡೆದು ಪೋಲಾಗುತ್ತಿದೆ. ಇದರಿಂದ ನಾಲೆ ಮೂಲಕ ಹರಿದು ಬರುವ ನೀರು ನಂಬಿ ದ್ವಿಬೆಳೆ ಬೆಳೆಯಲು ಉತ್ಸುಕರಾಗಿರುವ ರೈತರು ಹತಾಶರಾಗಿದ್ದಾರೆ.

ಹೋದಿರಾಯನಹಳ್ಳ ಪಥ ಪರಿವರ್ತನಾ ಯೋಜನೆಯಲ್ಲಿ ಸುಮಾರು 6 ಸಾವಿರ ಎಕರೆ ಭೂ ಪ್ರದೇಶಕ್ಕೆ ನೀರೊದಗಿಸುವ ಉದ್ದೇಶ ಹೊಂದಲಾಗಿದೆ. ಆದರೆ ಜಂಬದಹಳ್ಳ ಜಲಾಶಯಕ್ಕೆ ಗಿರಿ ಪ್ರದೇಶಗಳಿಂದ ಹರಿದು ಬರುವ ಒಳನೀರು ಹರಿವಿನ ಪ್ರಮಾಣ ಕಡಿಮೆಯಾಗಿದ್ದರಿಂದ ಇದಕ್ಕೆ ಸಮಾನಾಂತರವಾಗಿ ಹರಿಯುತ್ತಿದ್ದ ಹೋದಿರಾಯನ ಹಳ್ಳದ ಪಥ ತಿರುಗಿಸಿ ಜಂಬದಹಳ್ಳ ಜಲಾಶಯ ಭರ್ತಿ ಮಾಡಲು ಸರ್ಕಾರ 1987ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ಕಾಮಗಾರಿ ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಕಾರಣ ಕಳೆದ ವರ್ಷವೂ ಸುರಂಗ ಮಾರ್ಗದಲ್ಲಿ ಮಣ್ಣು ಕುಸಿದು ಜಂಬದಹಳ್ಳ ಜಲಾಶಯಕ್ಕೆ ನೀರು ಹರಿದು ಬರಲಿಲ್ಲ. ಈ ಬಾರಿಯೂ ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಬಳಕೆ ಮಾಡದೆ ನಿರ್ವಿುಸಲಾಗಿದ್ದ ನಾಲೆ ತಡೆಗೋಡೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಗುತ್ತಿಗೆದಾರ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಯೋಜನೆ ಬಗ್ಗೆ ತೋರಿದ ನಿರ್ಲಕ್ಷ್ಯಂದಲೇ ಯೋಜನೆ ಹಳ್ಳ ಹಿಡಿಯುವಂತಾಗಿದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಉತ್ತಮ ಯೋಜನೆಯನ್ನು ಅಧೋಗತಿಗೆ ತಲುಪುವಂತೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎನ್ನುತ್ತಾರೆ ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್.

3 ಕೋಟಿ ಹೆಚ್ಚುವರಿ ಅನುದಾನ: ಹೋದಿರಾಯನಹಳ್ಳ ಪಥ ಪರಿವರ್ತನಾ ಯೋಜನೆಗೆ ನಿಗದಿಪಡಿಸಲಾಗಿದ್ದ 4.29 ಕಿಮೀ ಉದ್ದದ ಡೈವರ್ಷನ್ ನಾಲೆ ನಿರ್ಮಾಣ ಮಾತ್ರವಲ್ಲ, ಯೋಜನೆಯ ಅಪ್ರೋಚ್ ರಸ್ತೆ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಕಳೆದ ವರ್ಷ ಸುರಂಗ ನಾಲೆಯಲ್ಲಿ ಮಣ್ಣು ಕುಸಿದ ನಂತರ ಕೈಗೊಂಡ ಡೈವರ್ಷನ್ ನಾಲೆಯ ಕಟ್ ಆಂಡ್ ಕವರ್ ನಿರ್ಮಾಣ ಕಾರ್ಯಕ್ಕೆ ಸರ್ಕಾರ 3 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಿರುವಾಗ ರೈತರ ಜಮೀನಿಗೆ ಯಾವಾಗ ನಿಗದಿತ ಪ್ರಮಾಣದ ನೀರು ಸೇರುತ್ತದೆ ಎಂಬುದರ ಸ್ಪಷ್ಟ ಚಿತ್ರಣವೂ ಸಿಗುತ್ತಿಲ್ಲ. ಸರ್ಕಾರ ಹತ್ತಾರು ಹಳ್ಳಿ ರೈತರ ಹಿತಕ್ಕಾಗಿ ರೂಪಿಸಿದ ಯೋಜನೆ ಅವಧಿ ಮೀರಿದರೂ ಪೂರ್ಣಗೊಳಿಸದ ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ತಯಾರಿ ನಡೆದಿದೆ.

ಸುರಂಗ ನಿರ್ವಣದಲ್ಲಿ ಎಡವಿದ ಕಂಪನಿ: ಹೋದಿರಾಯನಹಳ್ಳ ಯೋಜನೆಗೆ ಸಂಬಂಧಿಸಿದ ನಾಲೆಗಳು ಗುಣಮಟ್ಟದಿಂದ ಕೂಡಿದ್ದರೆ ಈ ಬಾರಿಯ ಮುಂಗಾರಿನಲ್ಲಿ ಮಳೆ ನೀರು ಜಂಬದಹಳ್ಳ ಸೇರಿ ಜಲಾಶಯ ಭರ್ತಿಯಾಗಿ ಹರಿಯಬೇಕಿತ್ತು. ಆದರೆ ಕಾಲುವೆ ತಡೆಗೋಡೆ ಆಗಾಗ ಒಡೆದು ಹೋಗಿದ್ದರಿಂದ ನೀರು ಪೋಲಾಗುತ್ತಿದೆ. ಹೋದಿರಾಯನಹಳ್ಳದಿಂದ ದಿನವೊಂದಕ್ಕೆ 150 ಕ್ಯೂಸೆಕ್​ಗೂ ಅಧಿಕ ಪ್ರಮಾಣದಲ್ಲಿ ಹರಿದು ಜಂಬದಹಳ್ಳ ಜಲಾಶಯದ ಒಡಲು ಸೇರಬೇಕಿದ್ದ ನೀರು ಅರ್ಧದಷ್ಟೂ ಬಾರದಂತಾಗಿದೆ. ತಪ್ಪು ಮಾರ್ಗ (ರಾಂಗ್ ಲೊಕೇಷನ್) ದಲ್ಲಿ ಸುರಂಗ ನಾಲೆ ನಿರ್ವಿುಸಿದ್ದರಿಂದ ಆ ಜಾಗದಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರು ಹರಿಯದಂತಾಗಿದೆ.

5 ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ: ಕಳಪೆ ಕಾಮಗಾರಿ ಸರಿಪಡಿಸಿ ಯೋಜನೆಗೆ ಅಂತಿಮ ಸ್ಪರ್ಶ ನೀಡದಿದ್ದರೆ ಯೋಜನೆ ಶಾಶ್ವತವಾಗಿ ಉಳಿಯುವುದೇ ಅನುಮಾನ. ಸರ್ಕಾರ ಇ-ಪ್ರೊಕ್ಯೂರ್​ವೆುಂಟ್ ಮೂಲಕ 2014-15ರಲ್ಲಿ ಚೆನೈ ಮೂಲದ ಕಂಪನಿಗೆ 45.03 ಕೋಟಿ ರೂ. ಮೊತ್ತದ ಕಾಮಗಾರಿ ಗುತ್ತಿಗೆ ನೀಡಿತ್ತು. 4.29 ಕಿಮೀ ಉದ್ದದ ಡೈವರ್ಷನ್ ನಾಲೆ, 600 ಮೀಟರ್ ಉದ್ದದ ಕೆನಾಲ್, ಡೈವರ್ಷನ್ ವಿಯರ್ 60 ಮೀಟರ್, ಜಂಬದ ಹಳ್ಳ ಏರಿ ದುರಸ್ತಿ ಜತೆ ಪ್ರಸ್ತುತವಿದ್ದ ಜಂಬದಹಳ್ಳ ಜಲಾಶಯದ ಬಲ ಮತ್ತು ಎಡ ದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ 2 ವರ್ಷದ ಗಡುವು ನೀಡಿತ್ತು. ಬಹು ಭಾಗದಷ್ಟು ಬಿಟ್ಟರೆ, ಇನ್ನುಳಿದ ಮುಖ್ಯ ಕಾಮಗಾರಿ 5 ವರ್ಷ ಕಳೆಯುತ್ತ ಬಂದರೂ ಪೂರ್ಣಗೊಂಡಿಲ್ಲ.

ತನಿಖೆಗೆ ಶಿಫಾರಸು: ಹೋದಿರಾಯನಹಳ್ಳ ಪಥ ಪರಿವರ್ತನಾ ಯೋಜನೆ ಕಾಮಗಾರಿ ಕಳಪೆಯಾಗಿದೆ. ಈ ಸಂಬಂಧ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಒತ್ತಾಯದ ಮೇರೆಗೆ ತನಿಖೆ ನಡೆಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.

ಕಾಮಗಾರಿ ಪೂರ್ಣಗೊಂಡಿರುವ ಕಡೆ ಡ್ಯಾಮೇಜ್ ಆಗಿರುವ ಭಾಗವನ್ನು ಮಳೆಗಾಲ ಮುಗಿದ ನಂತರ ದುರಸ್ತಿ ಮಾಡಿಸಲಾಗುವುದು. ಬಾಕಿ ಉಳಿದಿರುವ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ಕಾಮಗಾರಿಯ ಅಂತಿಮ ಬಿಲ್ ಪಾವತಿಸಿಲ್ಲ ಎಂದು ನಿರಾವರಿ ನಿಗಮದ ಬಿ.ಆರ್.ಪ್ರಾಜೆಕ್ಟ್ ಇಂಜಿನಿಯರ್ ಮಂಜುನಾಥ್ ವಿಜಯವಾಣಿಗೆ ಮಾಹಿತಿ ನೀಡಿದರು.