ಮೈಸೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಜೈಲಿಗೆ ಕಳುಹಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ಜಿಲ್ಲಾ, ನಗರ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ತಮ್ಮ ವಿರೋಧಿಗಳನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದೆ. ಸಿದ್ದರಾಮಯ್ಯರನ್ನೂ ಜೈಲಿಗೆ ಕಳುಹಿಸಲು ಕಾಯುತ್ತಿದೆ. ಹೀಗಾಗಿ ಮತ ನೀಡುವಾಗ ಯೋಚನೆ ಮಾಡಬೇಕು ಎಂದು ಹೇಳಿದರು.
ಅರಮನೆ ವ್ಯಕ್ತಿಯೆ ಬೇಕೆ?: ಯದುವೀರ ಅವರು ಮಹಾರಾಜರು. ಅರಮನೆಯಲ್ಲಿ ಇರುವವರು. ನಾನು ಬೀದಿಯಲ್ಲಿ ಇರುವವನು. 30 ವರ್ಷಗಳಿಂದ ಹೋರಾಟ ಮಾಡಿ ಬಂದವನು. ರಿಯಲ್ ಎಸ್ಟೇಟ್ ಮಾಡುವವನಲ್ಲ, ಸಾವಿರಾರು ಕೋಟಿ ಒಡೆಯನಲ್ಲ. ಫುಟ್‌ಪಾತ್‌ನಲ್ಲಿ ಊಟ-ತಿಂಡಿ-ಟೀ ಕುಡಿಯುವವನು. ಈಗ ಜನ ಸಾಮಾನ್ಯರು ತೀರ್ಮಾನ ಮಾಡಬೇಕು. ಸಾಮಾನ್ಯರಿಗೆ ಸಿಗುವ ವ್ಯಕ್ತಿ ಬೇಕೊ ಅಥವಾ ಪ್ರವೇಶ ಟಿಕೆಟ್ ತೆಗೆದುಕೊಂಡು ಅರಮನೆಗೆ ಹೋಗಿ ಭೇಟಿ ಮಾಡುವ ವ್ಯಕ್ತಿ ಬೇಕೊ ಎಂದು ಪ್ರಶ್ನಿಸಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಇಲ್ಲಿ ಕಾಂಗ್ರೆಸ್ ಇಷ್ಟ ಪಡುವ ಮತದಾರರೆ ಹೆಚ್ಚು. ನಮ್ಮನ್ನು ಸೋಲಿಸಿ ಮತ್ತೆ ಸಿದ್ದರಾಮಯ್ಯರಿಗೆ ಅವಮಾನ ಮಾಡಬೇಡಿ. ನನ್ನನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯರಿಗೆ ಗೌರವ ಸಲ್ಲಿಸಬೇಕು. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಸಿದ್ದರಾಮಯ್ಯ ಅವರಿಗೆ ಇದು ಪ್ರತಿಷ್ಠೆಯ ಕ್ಷೇತ್ರ. ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯಗಳಿಲ್ಲ. ಮೈಸೂರು ಜಿಲ್ಲೆ ಮತ್ತು ನಗರ ಕಾಂಗ್ರೆಸ್ ಅನ್ನು ಇತರ ಜಿಲ್ಲೆಗೆ ಹೋಲಿಕೆ ಮಾಡುವ ಹಾಗಿಲ್ಲ. 11 ಕ್ಷೇತ್ರಗಳ ಪೈಕಿ 9ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಳಿದ 3 ಕ್ಷೇತ್ರಗಳಲ್ಲೂ ಕಡಿಮೆ ಅಂತರದಿಂದ ಸೋತಿದ್ದೇವೆ ಎಂದರು.
ಭಾವನಾತ್ಮಕ ವಿಚಾರ ಮುಂದಿಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಈ ಹಿಂದೆ ಇದ್ದ ಸಂಸದ ಕೇವಲ ಗಲಭೆ ಎಬ್ಬಿಸುವ ಕೆಲಸ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಏನು ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರು ತಂದ ಅನುದಾನವನ್ನು ನಾನು ಮಾಡಿದೆ ಎಂದು ಓಡಾಡಿಕೊಂಡು ಬಂದರು. ಒಂದಷ್ಟು ಸುಳ್ಳನ್ನು ಸೃಷ್ಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಬಾರಿ ಒಕ್ಕಲಿಗ ಸಮುದಾಯದ ನನಗೆ ಟಿಕೆಟ್ ಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯ ಮತ ನೀಡಬೇಕು. ನಾನು ಸೋತು ಸೋತು ಸಾಕಾಗಿದೆ. ಕೊನೆಯದಾಗಿ ಕಾಂಗ್ರೆಸ್ ಅವಕಾಶ ನೀಡಿದೆ. ಈ ಬಾರಿ ಸೋತರೆ ನಾನೂ ಸತ್ತಂತೆ. ನಾನು ಹಣೆಯ ಮೇಲೆ ಜಾತಿ ಹೆಸರು ಬರೆದುಕೊಂಡವನಲ್ಲ. ನಾನು ಹುಟ್ಟಿದ್ದು ಒಕ್ಕಲಿಗನಾಗಿ. ಬೆಳೆಯುತ್ತ ವಿಶ್ವಮಾನನಾಗಿರುವೆ. ಆದರೆ, ಪ್ರತಾಪ್ ಸಿಂಹ ಟಿಕೆಟ್ ತಪ್ಪಿರುವ ಹತಾಶೆಯಿಂದ ಮಾಧ್ಯಮಗಳು ಮುಂದೆ ಜಾತಿ ಪ್ರಶ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹರನ್ನು ಸೋಲಿಸಬೇಕು ಎಂದು ಹೋರಾಟ ಮಾಡಿ ಟಿಕೆಟ್ ಪಡೆದುಕೊಂಡೆ. ಆದರೆ, ರಾಜಕೀಯ ಕುಸ್ತಿಗೆ ಅವರೆ ಇಲ್ಲ. ಬೇರೆಯವರನ್ನು ಕಳುಹಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳನ್ನು ಭಿಕ್ಷುಕರನ್ನಾಗಿ ಮಾಡಲಿದೆ. ಈಗಾಗಲೇ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ಸೌಲಭ್ಯ ದೊರೆಕದಂತೆ ಮಾಡುತ್ತಿದೆ. ಏಕರೂಪ ಚುನಾವಣೆ ಪದ್ಧತಿ ಜಾರಿ ಮಾಡಿ ಪ್ರಜಾಪ್ರಭುತ್ವವನ್ನು ನಾಶ ಮಾಡಲಿದೆ ಎಂದರು. .
‘ನಮ್ಮ ಸಂಸದರು ನಮ್ಮ ಹೆಮ್ಮೆ ಪೋಸ್ಟರ್’ ಬಿಡುಗಡೆ ಮಾಡಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಸಿನ್ ಖಾನ್ ಇನ್ನಿತರರಿದ್ದರು.