ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ 23ನೇ ಅವಧಿಯ ನಾಲ್ಕು ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ನಗರದ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.30ಕ್ಕೆ ಆರಂಭವಾದ ಚುನಾವಣೆಯಲ್ಲಿ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಮಾತ್ರ ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆ ತೆರಿಗೆ ನಿರ್ಧಾರ, ಹಣಕಾಸು ಮತ್ತು ಅಪೀಲುಗಳ ಸಮಿತಿಗೆ -ರೇಖಾ ಹೂಗಾರ, ಸಾರ್ವಜನಿಕ ಆರೋಗ್ಯ,ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿಗೆ- ಲಕ್ಷ್ಮೀ ರಾಠೋಡ, ನಗರ ಯೋಜನೆ ಮತ್ತು ನಗರ ಅಭಿವೃದ್ಧಿ ಸಮಿತಿಗೆ-ಮಾಧವಿ ಸಾರಂಗ ಹಾಗೂ ಲೆಕ್ಕ ಪತ್ರ ಸಮಿತಿಗೆ- ಬ್ರಹ್ಮನಾಂದ ಮಿರಜಕರ್ ಅವರು ಅವಿರೋಧವಾಗಿ ಆಯ್ಕೆಯಾದರು.
ಈಗಾಗಲೇ ಪಾಲಿಕೆಯ ಆಡಳಿತ ಹೊಂದಿರುವ ಬಿಜೆಪಿ ಸದಸ್ಯರು ನಾಲ್ಕು ಸಮಿತಿಗಳಲ್ಲಿ ಐದು ಸದಸ್ಯ ಸ್ಥಾನಗಳನ್ನು ಪಡೆದಿದ್ದರೆ ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ಸದಸ್ಯರು ನಾಲ್ಕು ಸಮಿತಿಗಳಲ್ಲಿ ತಲಾ ಎರಡರೆಡು ಸದಸ್ಯ ಸ್ಥಾನಗಳನ್ನು ಪಡೆದಿದ್ದಾರೆ. ಪ್ರತಿ ಸ್ಥಾಯಿ ಸಮಿತಿಯ 7 ಸ್ಥಾನಗಳಿಗೆ ಆಯ್ಕೆಗೊಂಡಿರುವ ಸದಸ್ಯರು ಸೇರಿ ಒಬ್ಬರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಮೇಯರ್, ಉಪಮೇಯರ್ ಸ್ಥಾನವನ್ನು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಕಾರಣ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಉತ್ತರ ವಿಧಾನಸಭಾ ಕ್ಷೇತ್ರದವರಿಗೆ ನೀಡುವಂತೆ ಪಕ್ಷದ ವರಿಷ್ಠರ ಮೂಲಕ ಹಾಲಿ, ಮಾಜಿ ಶಾಸಕರ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ, ನಗರ ಮುಖಂಡರು ಒಪ್ಪದಿರುವ ಕಾರಣ ಎರಡು ಕ್ಷೇತ್ರಗಳಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ. ಮೂವರು ಮಹಿಳೆ ಹಾಗೂ ಓರ್ವ ಪುರುಷನಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ವಾರ್ಡ್‌ಗಳ ಅಭಿವೃದ್ಧಿ, ಅನುದಾನ ಹಂಚಿಕೆ ಪ್ರತಿಯೊಂದು ವಿಷಯದಲ್ಲಿ ದಕ್ಷಿಣಕ್ಕೆ ಸಿಂಹಪಾಲು ನೀಡಲಾಗುತ್ತಿದೆ. ಆ ಭಾಗದ ವಾರ್ಡ್‌ಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ ಅಮೆಗತಿಯಲ್ಲಿ ಸಾಗುತ್ತಿವೆ. ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಬಿಜೆಪಿ ಸದಸ್ಯರು ಪ್ರತಿನಿಧಿಸುವ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ. ಈ ಕುರಿತು ಪಕ್ಷದ ಮುಖಂಡರಿಗೆ, ಶಾಸಕರ ಗಮನ ಸೆಳೆಯಲಾಗಿದೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಉಪಮೇಯರ್ ವಾಣಿ ಜೋಶಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಸದಸ್ಯರಾದ ವಾಣಿ ವಿಜಾಪುರ, ರವಿ ದೋತ್ರೆ, ರಾಜಶೇಖರ ಡೋಣಿ, ಆಯುಕ್ತ ಶುಭ.ಬಿ ಇತರರಿದ್ದರು.
.............
ಕೋಟ್ಸ್
ಈ ಬಾರಿ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಎಲ್ಲ ಸದಸ್ಯರು ಒಪ್ಪಿಗೆ ಪಡೆದುಕೊಂಡು ಅಂತಿಮಗೊಳಿಸಲಾಗಿದೆ. ಹೊಸ ಆಡಳಿತ ಮಂಡಳಿಯಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಹೆಚ್ಚಲಿದೆ.
- ಮಂಗೇಶ ಪವಾರ್, ಮಹಾಪೌರರು
.........