ವಿಜಯಪುರ: ದೌರ್ಜನ್ಯ ಪ್ರಕರಣಗಳಲ್ಲಿ ಸಕಾಲದಲ್ಲಿ ತ್ವರಿತ ಪರಿಹಾರ ಒದಗಿಸಿಕೊಡಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಪಂ ಸಿಇಒ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಹ ಫಲಾನುಭವಿಗಳು ಪಹಣಿ ಪತ್ರ ಪಡೆಯಲು ಸಮಾಜ ಕಲ್ಯಾಣ ಇಲಾಖೆಯಿಂದ ಭೂ ಒಡೆತನ ಯೋಜನೆಯಡಿ ಫಲಾನುಭವಿಗಳ ಪಟ್ಟಿ ತಯಾರಿಸಿ, ತಹಸೀಲ್ದಾರ್ಗಳಿಗೆ ಸಲ್ಲಿಸುವ ಪಹಣಿಪತ್ರ ಸಿದ್ಧಪಡಿಸಲು ಸಹಕರಿಸಬೇಕೆಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸ್ಥಳಾವಕಾಶ ಕುರಿತು ಸದಸ್ಯರಾದ ಯಮನಪ್ಪ ಸಿದರೆಡ್ಡಿ ಮಾಡಿದ ಮನವಿ ಆಲಿಸಿದ ಅವರು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.
ಪ್ರತಿ ಸಭೆಗೂ ಮುನ್ನ ಸಭೆಯ ಕುರಿತು ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ, ಉಸ್ತುವಾರಿ ಸಮಿತಿ ಸದಸ್ಯರಿಗೆ ಒದಗಿಸಬೇಕು. ಸಣ್ಣ ಪುಟ್ಟ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದವರನ್ನು ಭೇಟಿ ಮಾಡಿ ಪ್ರಕರಣ ಕುರಿತು ಮಾಹಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಸೂಚಿಸಿದರು.
ಪರಿಶಿಷ್ಟ ಜಾತಿ ಕಾಲನಿಯಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದ ಸಿಇಒ, ಭೂ ಒಡೆತನ ಯೋಜನೆಯಡಿ ಖರೀದಿಯಾದ ಜಮೀನುಗಳಿಗೆ ಆರ್ಟಿಸಿ ಹಾಗೂ ಪಹಣಿ ಬದಲಾವಣೆ ಅರ್ಹ ಫಲಾನುಭವಿಗಳಿಗೆ ತೊಂದರೆ ತಪ್ಪಿಸುವ ಜತೆಗೆ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಕ್ರೋಢಿಕರಿಸಿಕೊಂಡು ಅರ್ಹರಿಗೆ ಅನುಕೂಲವಾಗಲು ಕ್ರಮವಹಿಸುವಂತೆ ಅವರು ಸೂಚಿಸಿದರು.
ಭೂ ಒಡೆತನ ಯೋಜನೆಯಡಿ ಇಲ್ಲಿಯವರೆಗೆ ಸ್ವೀಕರಿಸಿದ ಅರ್ಜಿ ಹಾಗೂ ಇತ್ಯರ್ಥಗೊಳಿಸಿದ್ದ ಕುರಿತ ಪಟ್ಟಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಸಮಾಜ ಕಲ್ಯಾಣ ಇಲಾಖೆಯು ಪ್ರಗತಿ ಕುರಿತು ಆಗಾಗ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಬೇಕೆಂದು ಹೇಳಿದರು.
ಈಗಾಗಲೇ, ದಾಖಲಾಗಿರುವ ದೌರ್ಜನ್ಯ ಪ್ರಕರಣಗಳು ಶ್ರೀ ಇತ್ಯರ್ಥಗೊಳಿಸಬೇಕು. ಸ್ಮಶಾನದ ಜಾಗ ಒತ್ತುವರಿ, ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಸೇರಿ ಸಮಿತಿ ಸದಸ್ಯರ ಮನವಿಗೆ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಸಮಿತಿ ಸದಸ್ಯರಾದ ಅಭಿಷೇಕ ಚಕ್ರವರ್ತಿ ಮಾತನಾಡಿ, ಜಿಲ್ಲೆಯಲ್ಲಿ ಜಾತಿ ನಿಂದನೆ, ದೌರ್ಜನ್ಯ ನಿಂದನೆ ಪ್ರಕರಣಗಳು ದಾಖಲಾಗದಂತೆ ಸೂಕ್ತ ಜಾಗೃತಿ ಮೂಡಿಸಬೇಕು. ಈಗಾಗಲೇ ದಾಖಲಾಗಿರುವ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ$್ಮಣ ನಿಂಬರಗಿ ಮಾತನಾಡಿ, ಪ್ರತಿ ತಿಂಗಳು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕುಂದು ಕೊರತೆ ದೌರ್ಜನ್ಯ ಪರಿಹಾರ ಕುರಿತು ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಇಲಾಖೆ ವತಿಯಿಂದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಹೇಮಲತಾ ವಸದ, ಜಿ.ಪಂ. ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ರಾಜಶೇಖರ ಚೌರ, ನಾನು ಲಮಾಣಿ, ಮಹಾಂತೇಶ ಸಾಸಬಾಳ, ಬಂದಗಿ ಸಿದ್ದಪ್ಪ ಗಸ್ತಿ, ಮದನಕುಮಾರ ನಾಗರದಿನ್ನಿ, ರವಿಕಾಂತ ಬಿರಾದಾರ, ಯಮನಪ್ಪ ಸಿದರಡ್ಡಿ, ಸಿದ್ದು ರಾಯಣ್ಣವರ, ಮಲ್ಲು ತಳವಾರ ಮತ್ತಿತರರಿದ್ದಾರೆ.