ಮೈಸೂರು: ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಪ್ರಜ್ಞಾವಂತ ಸಮುದಾಯ ಸಹಕಾರ ನೀಡಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಕಲಚೇತನರ ಕಲ್ಯಾಣಾಕಾರಿ ಶಂಕರಗೌಡ ಪಾಟೀಲ ಮನವಿ ಮಾಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಶೇಷಚೇತನರ ಸ್ವಸಹಾಯ ಸಂಘಗಳು ಹಾಗೂ ಸಮುದಾಯದ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಂಗಳವಾರ ಪುರಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಂಗವಿಕಲರಿಗೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸಾಕಷ್ಟು ತೊಂದರೆಗಳಿರುತ್ತಿದೆ. ಇದರಿಂದ ಅವರು ಖಿನ್ನತೆಗೆ ಒಳಾಗಾಗಿರುತ್ತಾರೆ. ಹೀಗಾಗಿ ಅವರಿಗೆ ಮುಕ್ತ ಅವಕಾಶಗಳನ್ನು ನೀಡುವುದರ ಮೂಲಕ ಅವರಲ್ಲಿರುವ ಕೀಳರಿಮೆ ಹೋಗಲಾಡಿಸಿ ಧನಾತ್ಮಕ ಭಾವನೆ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಅಂಗವಿಕಲರು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳಲು ಅವಕಾಶಗಳನ್ನು ನೀಡಬೇಕಾಗಿದೆ. ಅವರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸರ್ಕಾರದ ಇಲಾಖೆಗಳು, ಪ್ರಜ್ಞಾವಂತ ಸಮುದಾಯ ಅವರಿಗೆ ಅವಕಾಶಗಳನ್ನು ನೀಡಬೇಕು ಎಂದರು.
ಅಂಗವಿಕಲರು ಸಾಮಾಜಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಇದ್ದಾರೆ. ಹೀಗಾಗಿ ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂಗವಿಕಲರಾದ ಪಿಎಚ್.ಡಿ ಪದವೀಧರೆ ಡಾ.ಬಿ.ಎಂ.ಮಾಲಾ ಅವರನ್ನು ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ವೈವಿಧ್ಯತೆ ಮತ್ತು ಸೇರ್ಪಡೆ ನಿರ್ದೇಶಕಿ ಎಸ್.ಆರ್.ದೀಪಶ್ರೀ, ಉದ್ಯಮಿ ಯುವರಾಜ್, ಪೊಲೀಸ್ ಮುಖ್ಯಪೇದೆ ರಾಜೇಂದ್ರ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಅಂಗವಿಕಲ ಮಕ್ಕಳಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ನಾನಾ ಕ್ರೀಡೆಯಲ್ಲಿ ಭಾಗವಹಿಸಿದ್ದ ಮಕ್ಕಳು ಸಂಭ್ರಮಿಸಿದರು.