ಕೋಲಾರ: ಪರಿಶಿಷ್ಟ ಜಾತಿಗಳಲ್ಲಿನ ಉಪಜಾತಿಗಳ ವಿಚಾರವಾಗಿ ಗೊಂದಲ ನಿರ್ಮಾಣವಾಗಿದೆ. ಅದಕ್ಕಾಗಿ ಸರ್ಕಾರ ಆಯೋಗ ನೇಮಕ ಮಾಡಿದೆ. ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು. ರಾಜ್ಯದಾದ್ಯಂತ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟ ವಿಚಾರ ಕುರಿತು ನಗರದ ಹಾರೋಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮುದಾಯದ ಸಭೆಯಲ್ಲಿ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಆಯೋಗವು ಒಳಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಗಳಲ್ಲಿನ ಉಪ ಜಾತಿಗಳ ಗಣತಿಗೆ ಮನೆ ಮನೆಗೆ ಭೇಟಿ ನೀಡಿದಾಗ ಕಡ್ಡಾಯವಾಗಿ ಮಾದಿಗ ಎಂದೇ ನಮೂದಿಸಿ ಎಂದು ಸಲಹೆ ನೀಡಿದರು.
ಹಿಂದೆ ಏನು ಬರೆಸಿದ್ದರೋ ಅದನ್ನು ಬಿಟ್ಟುಬಿಡಿ. ಆದಿದ್ರಾವಿಡ, ಆದಿಆಂಧ್ರ ಅಥವಾ ಎಕೆ, ಎಡಿ, ಎಎ ಯಾವುದೇ ಇದ್ದರೂ ಮೂಲ ಜಾತಿ ಮಾದಿಗ ಎಂದೇ ಬರೆಸಬೇಕು. ಇದಕ್ಕೆ ವಿದ್ಯಾವಂತರು ಸಹಕರಿಸಬೇಕು. ಈ ಎರಡು ತಿಂಗಳು ಸಮಾಜಕ್ಕಾಗಿ ಗಂಭೀರವಾಗಿ ಕೆಲಸ ಮಾಡಬೇಕು. ಈ ಮೂಲಕ ಮುಂದೆ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಮುಂದೆ ಕೊರಗಿದರೆ ಪ್ರಯೋಜನವಿಲ್ಲ ಎಂದು ಎಚ್ಚರಿಸಿದರು.
ಆಯೋಗ ನೀಡುವ ವರದಿ ಆಧಾರದ ಮೇಲೆ ಒಳಮೀಸಲಾತಿ ಜಾರಿ ಆಗುತ್ತದೆ. ಎರಡು ತಿಂಗಳ ಅವಧಿಯಲ್ಲಿ ಸರ್ವೇ ನಡೆಯಲಿದೆ. ಈ ಎರಡು ತಿಂಗಳ ಅವಧಿಯು ನಾವು 25 ವರ್ಷ ನಡೆಸಿದ ಹೋರಾಟಕ್ಕಿಂತ ಮಹತ್ವವಾಗಿದೆ. ಈ ಅವಧಿಯಲ್ಲಿ ಯಾವುದೇ ಕಾರಣಕ್ಕೆ ಎಚ್ಚರ ತಪ್ಪಬಾರದು. ಅಕಸ್ಮಾತ್ ಏನಾದರೂ ಎಡವಟ್ಟು ಮಾಡಿದರೆ, ಕೈಕಟ್ಟಿ ಕುಳಿತರೆ ಶಾಶ್ವತವಾಗಿ ಪರಿತಪಿಸಬೇಕಾಗುತ್ತದೆ. ಮುಂದಿನ ಪೀಳಿಗೆಯು ನೋವು ಅನುಭವಿಸಬೇಕಾಗುತ್ತದೆ. ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ. ಸರ್ವೇಗೆ ಬಂದಾಗ ಮಾದಿಗ ಎಂದೇ ನಮೂದಿಸಿ ಎಂದು ಹೇಳಿದರು. ಜನ ಜಾಗೃತಿ ಪಾದಯಾತ್ರೆ ಕಾರ್ಯಕ್ರಮವನ್ನು ಕೋಲಾರದಿಂದ ಆರಂಭಿಸಿದ್ದೇವೆ. ಮುಂದೆ ಗೊಂದಲ ಇರುವ ಸುಮಾರು 15 ಜಿಲ್ಲೆಗಳಿಗೆ ಹೋಗಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಒಂದು ಬಾರಿ ಎಡವಿದರೆ ಜೀವನ ಪರ್ಯಂತ ತೊಂದರೆ ಅನುಭವಿಸಬೇಕಾಗುತ್ತದೆ. ಜನ ಜಾಗೃತರಾಗುವ ಮೂಲಕ ಹಕ್ಕಿಗಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು. ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ಸಮಾಜಕ್ಕೆ ಮೀಸಲಾತಿ ನೀಡಬೇಕು, ಒಳಮೀಸಲಾತಿ ಜಾರಿಯಾಗಬಾರದು ಎಂದು ಕೆಲ ಬಲಾಡ್ಯರು ಸುಪ್ರೀಂಕೋರ್ಟ್ಗೆ ಹೋಗಿ ಸ್ಟೇ ತಂದರು. ಆದರೂ ಸಹ ನ್ಯಾಯಾಧೀಶರು ಅರ್ಟಿಕಲ್ 340 ಬೇಡ ಅಂತ ಒಪ್ಪಿಕೊಂಡರು. ಆದರೆ ನ್ಯಾಯ ದೊರಕಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.
ಒಳ ಮೀಸಲಾತಿಗೆ ಬೆಂಬಲ ನೀಡಲು ಶಾಸಕರು, ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಮಾದಿಗರನ್ನು ಮುಖ್ಯವಾಹಿನಿಗೆ ಬರಲು ಬಿಡಬಾರದು ಎಂಬುದು ಅವರ ಉದ್ದೇಶವಾಗಿದೆ. ರಾಜ್ಯದಲ್ಲಿ ನಿರೀೆಗೂ ಮೀರಿ ಮಾದಿಗ ಸಮುದಾಯವರು ಇದ್ದಾರೆ ಎಂದರು.