ಮೈಸೂರು: ಪುರಾಣದ ವ್ಯಕ್ತಿಗಳು ಇಂದಿಗೂ ಉಳಿದಿದ್ದರೆ ಅದು ರಂಗಭೂಮಿ ನಟರು, ಗಾಯಕರು, ತತ್ವಪದಕಾರರು, ಜಾನಪದಕಾರರಿಂದ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಶ್ರೀಬಸವಣ್ಣಸ್ವಾಮಿ ರಚಿತ ಜಗಜ್ಯೋತಿ ಬಸವೇಶ್ವರ, ಸಾನಂದ ವಿಲಾಸ, ಅಂಧಕಾಸುರ ಸಂಹಾರ ನಾಟಕಗಳನ್ನು ಒಳಗೊಂಡ ಪೌರಾಣಿಕ ನಾಟಕತ್ರಯ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಬಿ.ವಿ.ಉಮಾಕಾಂತ ಭೋಗಯ್ಯನಹುಂಡಿ ಸಂಪಾದಕತ್ವದ ‘ಶ್ರೀಬಸವಣ್ಣ ಸ್ವಾಮಿಗಳ ಸಾಹಿತ್ಯಾವಲೋಕನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮ, ಕೃಷ್ಣನನ್ನು ನಾವೇ ಸೃಷಿಸಿದ್ದೇವೆ ಎಂದು ಹೇಳಿ ಪ್ರತಿಮೆ ಮಾಡಿ, ಮಂದಿರ ಕಟ್ಟಿ ದೇಶದಾದ್ಯಂತ ಬಾಯಿ ಬಡಿದುಕೊಳ್ಳುವ ಜನರಿದ್ದಾರೆ. ಇಂತಹ ವೈದಿಕ ಸಂಸ್ಕೃತಿಯವರು, ರಾಜಕಾರಣಿಗಳಿಂದ ರಾಮ, ಕೃಷ್ಣ, ಬಸವಣ್ಣ ಉಳಿದಿಲ್ಲ. ನಿಜವಾಗಿಯೂ ಮಹಾನೀಯರನ್ನು ಉಳಿಸಿರುವುದು ನಮ್ಮ ಹಳ್ಳಿಯ ನಾಟಕಕಾರರು, ಕಲಾವಿದರು, ಭಜನಕಾರರು, ಹಾಡುಗಾರರು ಮಾತ್ರ ಎಂದು ಹೇಳಿದರು.
ಬಸವಣ್ಣಸ್ವಾಮಿ ಬರೆದಿರುವ ಬಸವೇಶ್ವರ ಚರಿತ್ರೆ ನಾಟಕ ನನ್ನನ್ನು ತುಂಬ ಆಶ್ಚರ್ಯ ಚಕಿತನಾಗಿಸಿದೆ. ಅವರು ಪುರಾಣವನ್ನು ಬಳಸಿಕೊಂಡು ನಾಟಕ ರಚಿಸಿದ್ದು, ನಾಟಕ ಓದಿದರೆ ಅತ್ಯಂತ ವೈಚಾರಿಕತೆಯಿಂದ ಕೂಡಿದೆ. ಆ ನಾಟಕವನ್ನು ಪುರಾಣದ ಭಾಗವನ್ನು ತೆಗೆದು ನೋಡಿದರೆ, ಗಿರೀಶ್ ಕಾರ್ನಾಡರ ನಾಟಕಕ್ಕೆ ಒಂದು ಹೆಜ್ಜೆ ಮುಂದಿದೆ ಹಾಗೂ ಚಂದ್ರಶೇಖರ ಕಂಬಾರರ ಶಿವರಾತ್ರಿ ನಾಟಕದ ಸಮನಾಂತರವಾಗಿದೆ ಎಂದು ಬಣ್ಣಿಸಿದರು.
ಕಂಬಾರರು ಬಿಜ್ಜಳನ ಹತ್ಯೆಯನ್ನು ಶರಣರು ಮಾಡಿಲ್ಲ ಎಂಬುದನ್ನು ಅವರ ನಾಟಕದಲ್ಲಿ ಅಳವಡಿಸಿದ್ದಾರೆ. ಕಂಬಾರ ಬರೆದಿದ್ದಾಗ ಅತ್ಯಂತ ವಿಸ್ಮಯವೆನಿಸಿತ್ತು. ಅವರ ದೃಷ್ಟಿಕೊನದ ಬಗ್ಗೆ ಗೌರವೆನಿಸಿತ್ತು. ಆದರೆ 70 ವರ್ಷಗಳ ಹಿಂದೆಯೇ ಇಂತಹ ಸಂಗತಿಯನ್ನು ಬಸವಣ್ಣಸ್ವಾಮಿ ಪ್ರಸ್ತಾಪಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಕಂಬಾರ ಬರವಣಿಗೆ ಹಾಗೂ ಬಸವಣ್ಣ ಸ್ವಾಮಿ ಬರವಣಿಗೆ ಎರಡು ತಾಳೆ ಹಾಕಬಹುದು. ಇದರಿಂದ ಬಸವಣ್ಣಸ್ವಾಮಿ, ಬಸವೇಶ್ವರರ ಚರಿತ್ರೆಯ ಬಗ್ಗೆ ಎಷ್ಟು ವೈಚಾರಿಕವಾಗಿದ್ದರು ಎಂಬೂದು ತಿಳಿಯುತ್ತದೆ. ಹೀಗಾಗಿ ಪುರಾಣದ ವ್ಯಕ್ತಿಗಳು ಇಂದಿಗೂ ಉಳಿದಿದ್ದರೆ ಅದು ರಂಗಭೂಮಿ ನಟರು, ಗಾಯಕರು, ತತ್ವಪದಕಾರರು, ಜಾನಪದಕಾರರಿಂದ ಎನ್ನುವುದು ಸತ್ಯ. ನೂರಾರು ಮಂಡಳಿಗಳು ತತ್ವಪದಗಳ ಮೂಲಕ ವಚನಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದಾರೆ ಎಂದರು.
ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಹೊರತಂದು ಪ್ರಕಟಿಸಿದ್ದರಿಂದ ವಚನಗಳು ಇಂದು ಜನ ಮಾನಸದಲ್ಲಿವೆ. ಕರ್ನಾಟಕದಲ್ಲಿ ನಿಜವಾಗಿಯೂ ಈ ಸಮಾಜದಲ್ಲಿ ಯಾವುದಾದರೂ ಧರ್ಮ ಇದ್ದರೆ ಅದು ಬಸವಣ್ಣ ಕಟ್ಟಿದ ಲಿಂಗಾಯತ ಧರ್ಮ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಸಿದ್ದು, ಸೆ.1ರಿಂದ 30ರವರೆಗೆ ಬೀದರ್‌ನ ಬಸವ ಕಲ್ಯಾಣದಿಂದ ಹಿಡಿದು ಬೆಂಗಳೂರಿನವರೆಗೆ, ನಾಡಿನಾದ್ಯಂತ ಎಲ್ಲ ಕರ್ನಾಟಕದ ಸ್ವಾಮೀಜಿಗಳು ಸೇರಿ ಬಸವ ದರ್ಶನವನ್ನು ಮಾಡುವ ಜನರನ್ನು ಸಂಘಟಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹಮಠದ ಶ್ರೀಮಹಾಂತ ಸ್ವಾಮೀಜಿ, ಸೋಮಹಳ್ಳಿ ವೀರಸಿಂಹಾಸನ ಶಿಲಾಮಠದ ಶ್ರೀಸಿದ್ಧಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ಸಂವಹನ ಪ್ರಕಾಶನ ಡಿ.ಎನ್.ಲೋಕಪ್ಪ, ಲೇಖಕ ಬಿ.ವಿ.ಉಮಾಕಾಂತ ಭೋಗಯ್ಯನಹುಂಡಿ ಇತರರು ಇದ್ದರು.