ಜಿಲ್ಲೆ

ಆಟವಾಡುವ ವಿಚಾರದಲ್ಲಿ ಯುವಕರ ನಡುವೆ ಗಲಾಟೆ, ರಾಜಕೀಯಕ್ಕೆ ಥಳುಕು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕನಿಶೆಟ್ಟಿಹಳ್ಳಿಯಲ್ಲಿ ವಾಲಿಬಾಲ್ ಎರಡು ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದು ಮಾತಿನ ಚಕಮಕಿಯ ಆಕ್ರೋಶದಲ್ಲಿ ಯುವಕರು ಮಚ್ಚು ಹಿಡಿದುಕೊಂಡು ಓಡಾಡಿದ್ದಾರೆ.

ಎರಡು ತಂಡಗಳು ವಾಲೀಬಾಲ್ ಆಟವಾಡುತ್ತಿದ್ದಾಗ ಬಾಲ್ ಔಟ್, ಬಾಲ್ ಇನ್ ಎಂಬ ವಿಚಾರದಲ್ಲಿ ವಾಗ್ವಾದ ನಡೆದಿದೆ. ಇದರಿಂದ ಪರಸ್ಪರ ಹೊಡೆದಾಡಿಕೊಂಡಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟ ಮುಗಿದು, ಮನೆಗಳಿಗೆ ವಾಪಸ್ ಹೋಗಿದ್ದು ಗ್ರಾಮದ ನರೇಂದ್ರ, ಗಣೇಶ, ಸೀನ, ಬಾಬು, ಬಾಲಾಜಿ, ಅನಿಲ್, ಕಲ್ಯಾಣ್, ನರಸಿಂಹಮೂರ್ತಿ ಕೈಗಳಲ್ಲಿ ಕಲ್ಲು, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ನರೇಂದ್ರ ಮಚ್ಚನ್ನು ಹಿಡಿದುಕೊಂಡು ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಗೋವರ್ಧನ್ ಎಂಬುವವರು ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತೊಂದೆಡೆ ಗ್ರಾಮದ ಗಣೇಶಪ್ಪನವರ ಮನೆಯ ಬಳಿ ಇದ್ದಾಗ ಗ್ರಾಮದ ಗೋವರ್ದನ್, ಭಾನುಪ್ರಕಾಶ್, ಬಾಬು, ಮಧುಸೂಧನ್, ಕಾರ್ತಿಕ್, ಲೋಕೇಶ್, ಮನೋಜ್, ಶಂಕರಪ್ಪ, ರಾಜಶೇಖರ್, ಸಿದ್ದೇಪಲ್ಲಿ ಹರೀಶ್, ಶಶಿಕುಮಾರ್, ಭರತ್ ಕುಮಾರ್ ಕೈಗಳಲ್ಲಿ ದೊಣ್ಣೆ ಹಿಡಿದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎಂದು ಇನ್ನೊಂದು ಗುಂಪಿನ ಬೆಂಬಲಿತ ನರಸಿಂಹಪ್ಪ ಆರೋಪಿಸಿದ್ದಾರೆ.

* ಗಲಾಟೆಗೆ ರಾಜಕೀಯ ಸ್ಪರ್ಶ

ಕನಿಶೆಟ್ಟಿಹಳ್ಳಿಯ ಗಲಾಟೆಗೆ ರಾಜಕೀಯ ಥಳುಕು ಹಾಕಿಕೊಂಡಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಆರೋಪ ಮತ್ತು ಪ್ರತ್ಯಾರೋಪಕ್ಕೆ ಮುಂದಾಗಿವೆ. ಮತದಾನದ ವಿಚಾರವಾಗಿ ಗಲಾಟೆ ಎಂಬುದಾಗಿ ಜೆಡಿಎಸ್ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಆರೋಪಿಸಿದರೆ, ಮತ್ತೊಂದೆಡೆ ವಾಲೀಬಾಲ್ ಆಟದ ವಿಚಾರವಾಗಿ ಗಲಾಟೆ ನಡೆದಿದೆ. ಇದರಲ್ಲಿ ರಾಜಕೀಯಕ್ಕೆ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ನ ಎಸ್‌ಟಿ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಪ್ಪ ತಿಳಿಸಿದ್ದಾರೆ.