ಜಿಲ್ಲೆ

ಭಾವನೆಗಳ ಜತೆ ಚೆಲ್ಲಾಟ ಕೆಲವರ ಕಾಯಕ

ಪ್ರಸಿನ್ ಕೆ.ಆರ್

ಹಾಸನ: ಕೆಲವರಿಗೆ ಭಾವನೆಗಳ ಜತೆ ಚೆಲ್ಲಾಟ ಆಡಿ ಸಮಾಜವನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಉದ್ಯೋಗ ಆಗಿಬಿಟ್ಟಿದೆ ಎಂದು ಜಿಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು.

ಸಾಹಿತಿ ಬಾನುಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಜನಗಳ ಜೀವನವನ್ನು ಕೂಡಿಸುವುದಾಗಲಿ, ಸಮಾಜ ಕಟ್ಟುವುದಾಗಲಿ ಕೆಲವರಿಗೆ ಬೇಕಾಗಿಲ್ಲ. ಸಮಾಜ ಒಡೆಯುವುದೇ ಕೆಲವರಿಗೆ ಉದ್ಯೋಗ ಆಗಿದೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಅಸಮಾಧಾನವ್ಯಕ್ತಪಡಿಸಿದರು.

ಬಾನುಮುಷ್ತಾಕ್ ಜಾಗತಿಕ ಮಟ್ಟದ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ. ಹಾಸನದಲ್ಲಿ ಅವರು ಬಹಳ ವರ್ಷ ವೃತ್ತಿ, ಜನಪರ, ರೈತಪರ ಹೋರಾಟ ಮಾಡಿದ್ದಾರೆ. ಶೋಷಿತ ಮಹಿಳೆಯರ ಪರ ಹೋರಾಟ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯಕ್ಕೆ ತಂದುಕೊಟ್ಟು ಇವತ್ತು ನಮ್ಮ ಕನ್ನಡಿಗರ ಗೌರವದ ಸಂಕೇತವಾಗಿದ್ದಾರೆ ಎಂದರು.

ಅದನ್ನು ನೀವು ಜಾತಿ, ಧರ್ಮ ಅಂತ ಹೇಳಿ ಕನ್ನಡಕ್ಕೆ ಸಿಕ್ಕಿರುವ ಪ್ರಶಸ್ತಿಯ ಗೌರವ ಕಳೆಯಬೇಡಿ. ಅವರು ಯಾವ, ಜಾತಿ ಧರ್ಮಕ್ಕೆ ಸೇರಿದವರಲ್ಲ. ಕನ್ನಡಿಗರ ಅಸ್ಮಿತೆ, ಸ್ವಾಭಿಮಾನ, ಗೌರವ, ಸಂಭ್ರಮದ ಸಂಕೇತ. ಇದನ್ನು ನಾವೆಲ್ಲಾ ಸ್ವಾಗತ ಮಾಡಬೇಕು. ಅದರ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು ನಿಜವಾಗಿ ಒಳ್ಳೆಯ ಉದ್ದೇಶ ಇರುವವರು ಮಾಡುವ ಕೆಲಸವಲ್ಲ. ಮೊಸರಿನಲ್ಲಿ ಕಲ್ಲು ಹುಡುಕಲು ಹೋದರೆ ಎಲ್ಲದರಲ್ಲೂ ಕಲ್ಲು ಹುಡುಕಬಹುದು. ಕೆಲವರಿಗೆ ಟೀಕೆ ಮಾಡುವುದೇ ಉದ್ಯೋಗ ಆಗಿದೆ. ಅಂತಹವರಿಗೆ ಏನು ಉತ್ತರ ಕೊಡಲು ಆಗುತ್ತದೆ ಎಂದು ಜರಿದರು.

ಸಮಾಜದಲ್ಲಿ ಸ್ವಾತಂತ್ರ್ಯ ಇದೆ ಮಾತನಾಡಲಿ, ಸಮಾಜ ಒಡೆದು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತೀರಾ? ಕೊನೆಗೆ ಒಂದು ಮನೆಯನ್ನು ಒಡೆಯುತ್ತೀರಾ? ನಾವು ಕೂಡಿ ಬದುಕಬೇಕಾ, ಒಡೆದಾಡಿಕೊಂಡು ಕಾಲ ಕಳೆಯಬೇಕಾ ಎಂದು ಪ್ರಶ್ನಿಸಿದರು.