ಜಿಲ್ಲೆ

ನಡೆಯುವುದು ಹೇಗೆಂದು ತನ್ನ ಅವಳಿ ಮರಿಗಳಿಗೆ ಕಲಿಸಿಕೊಡುತ್ತಿರುವ ಆನೆ: ಜಾಲತಾಣದಲ್ಲಿ ವಿಡಿಯೋಗೆ ಭಾರೀ ಮೆಚ್ಚುಗೆ!

mahalakshmihm

ಬಂಡೀಪುರ: ಆನೆಯು ತನ್ನ ಅವಳಿ ಮರಿಗಳನ್ನು ಆಟವಾಡಿಸುತ್ತಿರುವ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ತಾಯಿಯ ಬಾಂಧವ್ಯ ಹಾಗೂ ಪ್ರೀತಿ ಎಂದಿಗೂ ಮಕ್ಕಳಿಗೆ ವಿಶೇಷ ರೀತಿಯದ್ದಾಗಿರುತ್ತದೆ. ಅದು ಮನುಷ್ಯರಾದರೂ ಸರಿ, ಪ್ರಾಣಿಗಳಾದರೂ ಸರಿ ಎಂಬುದಕ್ಕೆ ಈ ವಿಡಿಯೋ ತಕ್ಕ ಉದಾಹರಣೆ ಎನ್ನಬಹುದು.

ಹೌದು.. ಬಂಡೀಪುರದ ಅಭಯಾರಣ್ಯದಲ್ಲಿ ಮುದ್ದುಮರಿಗಳೊಂದಿಗೆ ತಾಯಿ ಆನೆ ಆಟವಾಡುತ್ತಿದ್ದು, ಅಲ್ಲದೇ ನಡೆಯುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತಿರುವ ದೃಶ್ಯವನ್ನು ಅರಣ್ಯ ಸಿಬ್ಬಂದಿಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಇದೇ ವಾರ ಇವೆರಡು ಆನೆಮರಿಗಳು ಜನಿಸಿದವು. ಇವು ಅವಳಿಗಳಾಗಿದ್ದು, ತಾಯಿ ಆನೆಯೊಂದಿಗೆ ಆಟವಾಡುತ್ತಿರುತ್ತವೆ. ಹಾಗೆ ತಾಯಿ ಆನೆ ತನ್ನ ಮರಿಗಳಿಗೆ ನಡೆಯುವುದನ್ನು ಕಲಿಸಿಕೊಡುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಆನೆಗಳು ಅವಳಿ ಮರಿಗಳನ್ನು ಹಾಕುವುದೇ ಅಪರೂಪ ಎಂದು ಪ್ರಾಣಿ ತಜ್ಱರು ಹೇಳುತ್ತಾರೆ. ಕಳೆದ ವರ್ಷ ಶ್ರೀಲಂಕಾದಲ್ಲಿ ಅವಳಿ ಮರಿಗಳಿಗೆ ಆನೆಯೊಂದು ಜನ್ಮ ನೀಡಿತ್ತು.