ಚಿಕ್ಕಮಗಳೂರು: ಆಟಗಾರರಿಗೆ ಸ್ಪೂರ್ತಿಯ ಕೇಂದ್ರವಾಗಬೇಕಾದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನವು ಕೆಲವರ ಅತಿರೇಕದ ವರ್ತನೆಯಿಂದ ಕ್ರೀಡಾಳುಗಳ ನಡುವಿನ ವಾಗ್ವಾದ, ಕಿತ್ತಾಟದ ಕಣವಾಗಿ ಮಾರ್ಪಟ್ಟಿದೆ.
ಎಲ್ಲ ಸ್ಪರ್ಧೆಗಳನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕೆಂಬುದು ಸರ್ವವಿದಿತ. ಹಾಗೆಂದು ಇದು ಎದುರಾಳಿಗಳ ನಡುವಿನ ಭಿನ್ನಾಭಿಪ್ರಾಯವಲ್ಲ. ಒಂದೇ ಮೈದಾನದಲ್ಲಿ ಪ್ರತ್ಯೇಕವಾಗಿ ಆಟವಾಡುವ ಗುಂಪುಗಳು ಹಾಗೂ ಕ್ರೀಡಾ ತರಬೇತುದಾರರ ನಡುವೆ ತಲೆದೋರುತ್ತಿರುವ ನಿತ್ಯದ ಸಮಸ್ಯೆ ಇದು.
ನಿತ್ಯ ಬೆಳಗ್ಗೆ ಹಾಗೂ ಸಂಜೆ ವೇಳೆ ಜಿಲ್ಲಾ ಆಟದ ಮೈದಾನದಲ್ಲಿ ಅಭ್ಯಾಸ, ಉಲ್ಲಾಸಕ್ಕಾಗಿ ಆಡಲು ಹಲವರು ಬರುತ್ತಾರೆ. ಅವರಲ್ಲಿ ಅಥ್ಲೆಟಿಕ್ ತರಬೇತುದಾರರು ಹಾಗೂ ಇತರ ಕ್ರೀಡಾಪಟುಗಳೂ ಇರುತ್ತಾರೆ. ಇತ್ತೀಚೆಗೆ ಅಥ್ಲೀಟ್ಗಳು ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರೆ.
ದೂರು ಕೇಳಿಬಂದಿರುವ ಪ್ರಕಾರ ಸಮಸ್ಯೆಯಾಗಿರುವುದು ಟೆನಿಸ್ಬಾಲ್ ಆಟಗಾರರಿಂದ. ಆರೇಳು ತಂಡಗಳು ಇಲ್ಲಿ ಆಟವಾಡಲು ಬರುತ್ತಿದ್ದು, ಈ ತಂಡಗಳಿಂದ ಇತರ ಅಥ್ಲೆಟಿಕ್ ತರಬೇತುದಾರರು ಹಾಗೂ ಕ್ರೀಡಾಪಟುಗಳಿಗೆ ಈ ಸಮಸ್ಯೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಖುದ್ದು ಪಾಲಕರು ಹಾಗೂ ತರಬೇತಿ ನಿರತ ಬಾಲಕರೇ ಆಕ್ಷೇಪವೆತ್ತಿದ್ದಾರೆ.
ಟೆನಿಸ್ಬಾಲ್ ಆಟಗಾರರ ಪ್ರಕಾರ ಅವರು ಎಂದಿನಂತೆ ಆಟವಾಡುತ್ತಿದ್ದು, ಉದ್ದೇಶಪೂರ್ವಕವಾಗಿ ಯಾರಿಗೂ ಅಡ್ಡಿಯುಂಟು ಮಾಡುತ್ತಿಲ್ಲ. ಉದ್ದೇಶಿತ ಆಟದ ಮೈದಾನದಲ್ಲೇ ಅವಕಾಶವಿಲ್ಲವೆಂದಾದರೆ ಮತ್ತೆಲ್ಲಿ ಆಡಬೇಕು ಎಂದು ಟೆನಿಸ್ಬಾಲ್ ಕ್ರಿಕೆಟ್ ಆಟಗಾರರು ಪ್ರಶ್ನಿಸುತ್ತಿದ್ದಾರೆ.
ಹಿಂದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾ ಸಾಧಕರಿಗೆ ಸ್ಪೂರ್ತಿಯಾಗಿದ್ದ ಆಟದ ಮೈದಾನವಿದು. ಈ ಹಿನ್ನೆಲೆಯಲ್ಲೇ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಂತೆಯೇ ನೇಪಥ್ಯಕ್ಕೆ ಸರಿದಿರುವ ಆ ಕ್ರೀಡಾವೈಭವ ಮತ್ತೆ ಮರುಕಳಿಸಬೇಕೆನ್ನುವುದು ಜಿಲ್ಲೆಯ ಅನೇಕರ ಬಯಕೆ. ಈ ಮಧ್ಯೆ 10 ವರ್ಷದೊಳಗಿನ ಮಕ್ಕಳು ಅಥ್ಲೆಟಿಕ್ ತರಬೇತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿ ಮೈದಾನವೇನೋ ಇದೆ. ಆದರೆ ಸೌಲಭ್ಯಗಳ ಕೊರತೆಯೂ ಅಷ್ಟೇ ಕಾಡುತ್ತಿದೆ.
ಚೆಂಡು ತಗುಲಿ ಗಾಯ: ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ತರಬೇತಿ ನಿರತ ಮಕ್ಕಳಿಗೆ ಹಲವು ಬಾರಿ ಚೆಂಡು ತಗುಲಿ ಪೆಟ್ಟಾದ ನಿದರ್ಶನವಿದೆ. ಒಂದೊಮ್ಮೆ ಚೆಂಡು ರಭಸವಾಗಿ ಬಂದು ತಗುಲಿದಲ್ಲಿ ಮಕ್ಕಳಿಗೆ ಸಮಸ್ಯೆಯಾಗುವುದು ನಿಶ್ಚಿತ. ಈ ಬಗ್ಗೆ ಪ್ರಶ್ನಿಸಿದರೆ ಕ್ರಿಕೆಟ್ ಆಟಗಾರರು ನಮ್ಮ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ ಎನ್ನುವ ಆರೋಪ ಅಥ್ಲೆಟಿಕ್ ಕೋಚ್ಗಳಿಂದ ಕೇಳಿಬಂದಿದೆ.
ಕ್ರೀಡಾಂಗಣ ಮುಕ್ತ ಮುಕ್ತ: ಈ ಮೈದಾನ ಕ್ರೀಡಾಸಕ್ತರಿಗೆ ಮುಕ್ತವಾಗಿದ್ದು, ಯಾವುದೇ ಕ್ರೀಡೆಗಳನ್ನೂ ಆಡಬಹುದಾಗಿದೆ. ಹಾಗೆಂದು ಕೆಲವರು ಸ್ವೇಚ್ಛೆಯಿಂದ ವರ್ತಿಸುತ್ತಿರುವುದು ಕಂಡುಬಂದಿದೆ. ಈ ದುರ್ವರ್ತನೆಗಳಿಗೆ ಕಡಿವಾಣ ಹಾಕುವುದು ಅಗತ್ಯ ಎನ್ನುವ ಒತ್ತಾಯ ಕೇಳಿಬಂದಿದೆ. ಅಷ್ಟಕ್ಕೂ ಅಥ್ಲೀಟ್ಗಳು ಮತ್ತಿತರ ಕ್ರೀಡಾಪಟುಗಳು ಕ್ರಿಕೆಟ್ ಆಟಗಾರರಿಗೆ ಅವಕಾಶ ಕೊಡಲೇಬಾರದು ಎನ್ನುವ ಒತ್ತಡವನ್ನಂತೂ ಹೇರಿಲ್ಲ. ಕ್ರೀಡಾಪಟುಗಳಿಗೆ ಸಮಸ್ಯೆಯಾಗದಂತೆ ಕಡಿವಾಣ ಹಾಕಿ ಮುನ್ನೆಚ್ಚರಿಕೆ ವಹಿಸಬೇಕೆಂದು ಕೋರುತ್ತಿದ್ದಾರೆ.
ಪ್ರತ್ಯೇಕವಾಗಿ ಆಡಲು ಆಕ್ಷೇಪವಿಲ್ಲ: ಟೆನಿಸ್ಬಾಲ್ ಕ್ರಿಕೆಟ್ ಆಟಗಾರರು ಮಕ್ಕಳು ತರಬೇತಿ ಪಡೆಯುತ್ತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲೇ ನೆಟ್ ಅಳವಡಿಸಿಕೊಂಡು ಪ್ರತ್ಯೇಕ ಆಟವಾಡಿಕೊಳ್ಳಲು ನಮ್ಮ ಆಕ್ಷೇಪವಿಲ್ಲ. ಆದರೆ ಇವರಲ್ಲಿರುವ ಕೆಲವರು ಅನುಸರಿಸುತ್ತಿರುವ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಮೈದಾನದ ಮುಖ್ಯ ವೇದಿಕೆ ಮುಂಭಾಗದಲ್ಲಿ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕು.
ಜಿಲ್ಲಾ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಜಿಲ್ಲಾಡಳಿತದ ನೆರವಿನಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮೈದಾನದಲ್ಲಿ ಬಾಸ್ಕೆಟ್ಬಾಲ್ ಆಟವಾಡಲು ಪ್ರತ್ಯೇಕ ಕೋರ್ಟ್ಗಳನ್ನು ನಿರ್ವಿುಸಿರುವುದರಿಂದ ಈ ಆಟಗಾರರು ಇಂಥ ಸಮಸ್ಯೆಗಳಿಂದ ಹೊರಗುಳಿದಿದ್ದಾರೆ. ಈ ನಡುವೆ ಮೂರ್ನಾಲ್ಕು ತಂಡಗಳಿರುವ ಫುಟ್ಬಾಲ್ ಆಟಗಾರರು ಸಹ ಇದೇ ಮೈದಾನದಲ್ಲಿ ಆಟವಾಡಲು ಅವಕಾಶ ನೀಡಬೇಕೆಂಬ ಮನವಿ ಮುಂದಿಟ್ಟಿದ್ದಾರೆ. ಸ್ಥಳ ಅಭಾವದಿಂದಾಗಿ ಪ್ರಸ್ತುತ ಈ ತಂಡಗಳು ಆಫೀಸರ್ಸ್ ಕ್ಲಬ್ ಪಕ್ಕದ ಮೈದಾನವನ್ನು ಆಶ್ರಯಿಸಿವೆ.
ಜಿಲ್ಲಾ ಆಟದ ಮೈದಾನದಲ್ಲಿ ಕ್ರಿಕೆಟ್ ಆಟವಾಡುವವರ ವಿರುದ್ಧ ದೂರು ಕೇಳಿಬಂದಿದೆ. ವಿವಾದಕ್ಕೆ ಅವಕಾಶವಿಲ್ಲದಂತೆ ಹಾಗೂ ಕ್ರಿಕೆಟ್ ಆಟಗಾರರಿಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಆಡಲು ಅವಕಾಶ ನೀಡಲಾಗಿದೆ. ಕೆಲವರು ಕಿರಿಕಿರಿ ಮಾಡುತ್ತಿರುವ ಆರೋಪವಿದ್ದು, ಈ ಬಗ್ಗೆ ಲಿಖಿತ ಮನವಿ ಸಲ್ಲಿಸುವಂತೆ ಅಥ್ಲೀಟ್ಗಳಿಗೆ ಸೂಚಿಸಲಾಗಿದೆ. ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಎಚ್.ಪಿ.ಮಂಜುಳಾ ಹುಲ್ಲಹಳ್ಳಿ ತಿಳಿಸಿದ್ದಾರೆ.