ಪಾಂಡವಪುರ : ಕ್ರೀಡಾಪಟುಗಳು ಕಣಕ್ಕೆ ಇಳಿದಾಗ ಕ್ರೀಡಾಸ್ಪೂರ್ತಿಯಿಂದ ಆಟವಾಡಬೇಕು. ಸಣ್ಣ-ಪುಟ್ಟ ವಿಚಾರಗಳಿಗೆ ಗೊಂದಲ ಮಾಡಿಕೊಳ್ಳಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಶಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಣ ವಿಭಾಗ ಮತ್ತು ಪಿಎಸ್‌ಎಸ್‌ಕೆ ಪ್ರೌಢ ಶಾಲೆಯಿಂದ ತಾಲೂಕಿನ ರೈಲ್ವೆ ನಿಲ್ದಾಣದ ಪಿಎಸ್‌ಎಸ್‌ಕೆ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಶಿಕ್ಷಕರು ಕ್ರೀಡಾಪಟುಗಳ ನಡುವೆ ಗೊಂದಲ ಏರ್ಪಟ್ಟರೆ ತಕ್ಷಣ ಮಾಹಿತಿ ನೀಡಬೇಕು. ಕ್ರೀಡೆ ಮುಗಿಯುವವರೆಗೂ ಸ್ಥಳದಲ್ಲೇ ಇದ್ದು ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ, ಮದ್ದೂರು, ಮಳವಳ್ಳಿ, ಮಂಡ್ಯ ನಗರ ಮತ್ತು ಮಂಡ್ಯ ಗ್ರಾಮಾಂತರ ಸೇರಿದಂತೆ ಬಾಲಕ-ಬಾಲಕಿಯರ ಒಟ್ಟು 16 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಪಿಎಸ್‌ಎಸ್‌ಕೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕಿ ಟಿ.ಆರ್.ರೇಖಾ ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಂಡು ಕ್ರೀಡೆಗೆ ಚಾಲನೆ ನೀಡಿದರು.
ರಾಷ್ಟ್ರಮಟ್ಟ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಹೊನ್ನು, ಐಶ್ವರ್ಯಾ, ಚಿನ್ಮಯಿ ಲಕ್ಷ್ಮೀ ಹಾಗೂ ವಿವಿಧ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕೆನ್ನಾಳು ಗ್ರಾಪಂ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಎಸ್‌ಕೆ ಪ್ರೌಢಶಾಲೆ ಗೌರವ ಕಾರ್ಯದರ್ಶಿ ನಂದೀಶ್, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಶಿಕ್ಷಕರಾದ ಮಾಣಿಕ್ಯನಹಳ್ಳಿ ಜಯರಾಮು, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ್, ಶಿವಕುಮಾರ್ ಇತರರು ಇದ್ದರು.