ಪಡುಬಿದ್ರಿ: ಮರು ಬಳಕೆಯಿಲ್ಲದ ಪ್ಲಾಸ್ಟಿಕ್ ತ್ಯಾಜ್ಯವನ್ನು ಉರುವಲಾಗಿ ಬಳಸಲು ಸಿಮೆಂಟ್ ಕಾರ್ಖಾನೆಗೆ ರವಾನಿಸುವ ಮೂಲಕ ಕಾಪು ಪುರಸಭೆ ಅನವಶ್ಯಕವಾದ ತ್ಯಾಜ್ಯ ನೆಲಭರ್ತಿಯನ್ನು ತಪ್ಪಿಸಿ ಪರಿಸರ ಸ್ನೇಹಿಯಾದ ಕಾರ್ಯಕ್ಕೆ ಹೆಜ್ಜೆಯಿರಿಸಿದೆ.
ಕಾಪು ಪೇಟೆ ಬಳಿಯಿರುವ ಘನ ತ್ಯಾಜ್ಯ ವಿಲೇ ಘಟಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇ ಮಾಡುವುದೇ ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದಕ್ಕಾಗಿ ಪುರಸಭೆಯಿಂದ ತ್ಯಾಜ್ಯ ವಿಲೇಗೆ ವಿಭಿನ್ನ ರೀತಿಯ ಪ್ರಯತ್ನಗಳು ನಿರಂತರವಾಗಿ ನಡೆದಿತ್ತು. ಅದರಂತೆ ಈಗಾಗಲೇ ಸಂಗ್ರಹವಾಗುವ ತ್ಯಾಜ್ಯದ ಪೈಕಿ ಮಾರುಕಟ್ಟೆ ಮೌಲ್ಯ ಹೊಂದಿದ್ದು ಮರುಬಳಕೆಗೆ ಯೋಗ್ಯವಿರುವ ಪ್ಲಾಸ್ಟಿಕನ್ನು ನೇರ ತ್ಯಾಜ್ಯ ಸಂಸ್ಕರಣೆಗೆ ನೀಡುವ ಮೂಲಕ ಪುರಸಭೆ ಆದಾಯ ಗಳಿಸುತ್ತಿದೆ. ಉಳಿದಂತೆ ಗುಣಮಟ್ಟದ ಆದರೆ ಮರುಬಳಕೆ ಮೌಲ್ಯ ಹೊಂದಿರದ ತೆಳುವಾದ ಪ್ಲಾಸ್ಟಿಕ್ ಇತ್ಯಾದಿ ಪ್ಲಾಸ್ಟಿಕನ್ನು ಪುರಸಭೆಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ಸಂಪೂರ್ಣ ಖಾಸಗಿ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಎಂಬಂತೆ ಸಂಸ್ಕರಿಸಿ ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ಈಗಾಗಲೇ ಸುಮಾರು 20 ಟನ್‌ಗಳಷ್ಟು ಪ್ಲಾಸ್ಟಿಕನ್ನು ಈ ಕೆಲಸಕ್ಕೆ ಬಳಸಲಾಗಿದೆ.
ಆದರೆ ಮರುಬಳಕೆ ಮೌಲ್ಯ ಹೊಂದಿರದ ಮತ್ತು ರಸ್ತೆ ನಿರ್ಮಾಣಕ್ಕೆ ಯೋಗ್ಯವಲ್ಲದ ಪ್ಲಾಸ್ಟಿಕ್ ವಿಲೇವಾರಿ ಪುರಸಭೆಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಸರ್ಕಾರದ ನಿರ್ದೇಶನದಂತೆ ಸದರಿ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗೆ ಉರುವಲಾಗಿ ಬಳಸಲು ಕಳುಹಿಸಬಹುದಾಗಿದ್ದರೂ ಕರಾವಳಿ ಪ್ರದೇಶದಲ್ಲಿ ಸಿಮೆಂಟ್ ಕಾರ್ಖಾನೆಗಳು ಇರದ ಕಾರಣ ಬಹು ದೂರದ ಕಲಬುರಗಿ, ಬಾಗಲಕೋಟೆ ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವುದು ಪುರಸಭೆಗೆ ಆರ್ಥಿಕವಾಗಿ ಹೊರೆಯಾಗಿತ್ತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಘನ ತ್ಯಾಜ್ಯ ವಿಲೇ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ವಸ್ತುಗಳ ಪೈಕಿ ದಹನ ಮೌಲ್ಯವುಳ್ಳ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವ ವ್ಯವಸ್ಥೆಗೆ ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ಸಹಕಾರದೊಂದಿಗೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅವರ ಸತತ ಪ್ರಯತ್ನ ನಡೆಸಿ ಇದೀಗ ಯಶಸ್ವಿಯಾಗಿದ್ದಾರೆ. ಅದರಂತೆ ಕಾಪು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬೆಂಗಳೂರು ಮೂಲದ ರೀಕಾರ್ಟ್ ಎಂಬ ತ್ಯಾಜ್ಯ ವಿಲೇ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ರವಾನಿಸಲಾಗಿದೆ.
ಎಲ್ಲೂರಿನಲ್ಲಿನ ಕಾಪು ಪುರಸಭೆ ಘನ ತ್ಯಾಜ್ಯ ವಿಲೇವಾರಿ ಘಟಕ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಅಲ್ಲಿಗೆ ಸ್ಥಳಾಂತರಗೊಳ್ಳುವ ಪೂರ್ವದಲ್ಲಿ ಇಲ್ಲಿ ಸಂಗ್ರಹವಾಗಿರುವ ವಿವಿಧ ತ್ಯಾಜ್ಯ ವಸ್ತುಗಳನ್ನು ಸಂಪನ್ಮೂಲವಾಗಿ ಬಳಸಿಕೊಳ್ಳಲು ಹಲವಾರು ರೀತಿಯ ಮಾದರಿ ಯೋಜನೆಗಳನ್ನು ಪುರಸಭೆ ಕೈಗೆತ್ತಿಕೊಂಡಿದೆ. ಪ್ಲಾಸ್ಟಿಕ್‌ಗಳನ್ನು ಸಂಸ್ಕರಿಸಿ ರಸ್ತೆ ನಿರ್ಮಾಣಕ್ಕೆ ಬೇಕಾದ ಡಾಂಬರು ಮಿಶ್ರಣವನ್ನಾಗಿ ಬಳಸಬಹುದಾದ ತಂತ್ರಜ್ಞಾನಕ್ಕಾಗಿ ನೀಡಲಾಗಿದ್ದು, ಈ ಮೂಲಕ ಕಳೆದ ನಾಲ್ಕೈದು ತಿಂಗಳಲ್ಲಿ 25 ಟನ್‌ನಷ್ಟು ತ್ಯಾಜ್ಯ ವಿಲೇಯಾಗಿದೆ. ನೂತನ ಯೋಜನೆಯಂತೆ ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 20 ಟನ್‌ಗಳಷ್ಟು ಪ್ಲಾಸ್ಟಿಕನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸಲಾಗಿದೆ.
ವೆಂಕಟೇಶ ನಾವಡ, ಕಾಪು ಪುರಸಭೆ ಮುಖ್ಯಾಧಿಕಾರಿ