ಬೇಲೂರು: ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದ್ದು, ಇದರ ಬಳಕೆಯನ್ನೇ ನಿಲ್ಲಿಸುವುದು ಸೂಕ್ತ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ರೋಟರಿ ಕ್ಲಬ್ ವತಿಯಿಂದ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಮುಂಭಾಗ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ಸಂಗ್ರಹಣ ಡಬ್ಬಗಳನ್ನು ಪುರಸಭೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್‌ಮುಕ್ತ ಬೇಲೂರು ಮಾಡಲು ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿತ್ತು. ಅದನ್ನು ಈಗಲೂ ಮುಂದುವರಿಸಿದ್ದು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಜತೆಗೆ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕೊಳ್ಳುವುದರ ಬದಲು ಇತರ ಬಾಟಲಿಯಲ್ಲಿ ನೀರನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ದಿನಸಿ ಪದಾರ್ಥಗಳು, ತರಕಾರಿಗಳನ್ನು ಕೊಳ್ಳುವಾಗ ಅಂಗಡಿಯವರ ಬಳಿ ಪ್ಲಾಸ್ಟಿಕ್ ಕವರ್ ಕೇಳದೆ ಸ್ವತ: ನಾವುಗಳೇ ಬಟ್ಟೆ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚಗಳನ್ನು ಬಳಸುವುದನ್ನು ನಿಲ್ಲಿಸುವ ಮೂಲಕ ಬದಲಾವಣೆಗೆ ಮುಂದಾಗಬೇಕು. ಭವಿಷ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದರು.
ರೋಟರಿ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಸಿ.ಎ.ದೇವ್ ಆನಂದ್ ಮಾತನಾಡಿ, ಸ್ವಚ್ಛತೆಗೆ ನಾವೆಲ್ಲರೂ ಹೆಚ್ಚಿನ ಪ್ರಾಮುಖ್ಯ ಕೊಡಬೇಕು. ಬೇಲೂರಿನ ದೇಗುಲ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಇಂತಹ ಸ್ಥಳದಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕಾಗುತ್ತದೆ. ಇದರೊಂದಿಗೆ ನಮ್ಮ ಪರಿಸರ ಉಳಿವಿಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ಮರುಬಳಕೆ ಮಾಡದಂತೆ ಅರಿವು ಮೂಡಿಸುವ ಕೆಲಸವಾಗಬೇಕು. ಇಲ್ಲಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಕಸದ ಬುಟ್ಟಿಯಲ್ಲಿ ಹಾಕಲು ಡಬ್ಬ ಇಡಲಾಗಿದೆ. ಇಂತಹ ಸ್ಥಳಗಳು ಸ್ವಚ್ಛವಾಗಿದ್ದರೆ ದೇಶವೇ ಸ್ವಚ್ಛವಾಗಿರುತ್ತದೆ. ಪುರಸಭೆ ಅಧ್ಯಕ್ಷರು ರೋಟರಿ ಸಂಸ್ಥೆಯೊಂದಿಗೆ ಸೇರಿ ಸಮಾಜಮುಖಿ ಕೆಲಸ ಮಾಡಲಿ ನಾವು ಸಹಕಾರ ನೀಡುತ್ತೇವೆ. ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪುರಸಭಾ ಅಧ್ಯಕ್ಷರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎನ್ ಶಂಭುಗೌಡ, ಸಹಾಯಕ ಪ್ರಾಂತಪಾಲ ಅರುಣ್ ರಕ್ಷಿಧಿ, ಜೋನಲ್ ಲೆಫ್ಟಿನೆಂಟ್ ವೈ.ಡಿ.ಲೋಕೇಶ್, ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜು, ಖಜಾಂಚಿ ರಮೇಶ್, ಸದಸ್ಯರಾದ ರಂಗನಾಥ್, ರಾಜೇಗೌಡ, ಮೊಗಪ್ಪ ಗೌಡ, ರೇಖಾ ದೇವ್ ಆನಂದ್, ಸಂದೇಶ್, ರಾಘವೇಂದ್ರ, ಮುರಳಿ ಇತರರಿದ್ದರು.