ಅನ್ಸಾರ್ ಇನೋಳಿ ಉಳ್ಳಾಲ
ರಸ್ತೆಬದಿ, ಖಾಲಿ ಜಾಗದಲ್ಲಿ ಗಬ್ಬೆದ್ದು ನಾರುತ್ತಿರುವ ತ್ಯಾಜ್ಯರಾಶಿಗೆ ಮುಕ್ತಿ ನೀಡಲು ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪ್ಲಾಸ್ಟಿಕ್ ಸಮಸ್ಯೆ ಪರಿಹಾರಕ್ಕೆ ಬೇಲಿಂಗ್ ಯಂತ್ರ ಪಟ್ಟಣ ಪಂಚಾಯಿತಿಗೆ ತಲುಪಿದ್ದು, ಒಣಕಸ ವಿಂಗಡಣಾ ಘಟಕ ಸಿದ್ಧವಾಗಿದೆ.
ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಪಂಚಾಯಿತಿ ಕ್ರಮ ಕೈಗೊಂಡರೂ, ಇಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಕೆಲವರ್ಷಗಳ ಹಿಂದೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ ಸ್ಮಶಾನದ ಬಳಿ ಜಮೀನು ಗುರುತಿಸಿದಾಗ ವಿರೋಧ ವ್ಯಕ್ತವಾಗಿದ್ದರಿಂದ ಆಗಿನ ಗ್ರಾಮ ಪಂಚಾಯಿತಿ ಆಡಳಿತ ಜನರ ಮನವೊಲಿಸುವ ಬದಲು ಯೋಜನೆಯನ್ನೇ ಕೈಬಿಟ್ಟಿತು. ಗ್ರಾಮ ಪಂಚಾಯಿತಿಯಾಗಿದ್ದಾಗಲೇ ಅತ್ಯಂತ ಹೆಚ್ಚು ಆದಾಯ ಹೊಂದಿದ್ದರೂ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಕೋಟೆಕಾರ್ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಏಳು ವರ್ಷವಾಗಿದ್ದು, ಆದಾಯ ದುಪ್ಪಟ್ಟಾದರೂ ಘನತ್ಯಾಜ್ಯ ಘಟಕ ನಿರ್ಮಾಣ ಸಾಧ್ಯವಾಗಿಲ್ಲ.
ವಿಲೇವಾರಿ ಸಮಸ್ಯೆ: ಮನೆಗಳಿಂದ ಕಸ ಸಂಗ್ರಹಿಸಿ ಸಾಗಿಸಲು ಟೆಂಪೋ, ಟಿಪ್ಪರ್, ಜೆಸಿಬಿ ಎಲ್ಲವೂ ಇಲ್ಲಿದೆ. ಆದರೆ ಕಸ ಸಂಗ್ರಹಿಸಿದ ಬಳಿಕ ವಿಲೇ ಮಾಡಲು ವ್ಯವಸ್ಥೆ ಇಲ್ಲ. ಇಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಪಚ್ಚನಾಡಿಗೆ ಕಳುಹಿಸಲಾಗುತ್ತಿದೆ. ತ್ಯಾಜ್ಯ ಸಾಗಿಸುವ ಸಂದರ್ಭ ಹಸಿ ಮತ್ತು ಒಣಕಸ ಬೇರ್ಪಡಿಸುವುದು ಕಡ್ಡಾಯ. ಇದಕ್ಕೆ ಮಡ್ಯಾರ್ ರಸ್ತೆಬದಿಯಿದ್ದ ಒಂದಷ್ಟು ಖಾಲಿ ಜಾಗ ಆಯ್ಕೆ ಮಾಡಿದ ಪಟ್ಟಣ ಪಂಚಾಯಿತಿ, ವಾಹನಗಳಲ್ಲಿ ತಂದ ಕಸ ಇಲ್ಲೇ ಸುರಿದು ಬೇರ್ಪಡಿಸಿ ಪಚ್ಚನಾಡಿಗೆ ಸಾಗಿಸುತ್ತಿದೆ. ಆದರೆ ಇಲ್ಲಿ ಮಳೆ ಬಿಸಿಲು ಬೀಳದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ಮಳೆ ಬಂದಾಗ ತ್ಯಾಜ್ಯನೀರು ರಸ್ತೆಯಲ್ಲಿ ಹರಿದು ದುರ್ನಾತ ಬೀರಿ ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿದೆ.
ಇದರ ವಿರುದ್ಧ ಚುನಾವಣೆಯ ಸಂದರ್ಭ ಸ್ಥಳೀಯರು ಪ್ರತಿಭಟನೆ ನಡೆಸಿ, ತ್ಯಾಜ್ಯ ತೆರವುಗೊಳಿಸದಿದ್ದರೆ ಓಟು ಹಾಕುವುದಿಲ್ಲ ಎಂದು ಎಚ್ಚರಿಸಿದರೂ ಪರಿಣಾಮವಾಗಲಿಲ್ಲ.ಜನಶಿಕ್ಷಣ ಟ್ರಸ್ಟ್ ಜಾಗೃತಿ ಕಾರ್ಯಕ್ರಮ ನಡೆಸಿದರೂ ಹಿಂದಿನ ಆಡಳಿತ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಆರೋಗ್ಯ ನಿರೀಕ್ಷಕ ವಿಕ್ರಂ ಕುಂದಾಪುರ ಸಾಕಷ್ಟು ಉತ್ಸಾಹ ತೋರಿದರೂ ಹಿಂದಿನ ಮುಖ್ಯಾಧಿಕಾರಿ ಹಾಗೂ ಆಡಳಿತಗಾರರ ಸಹಕಾರ ಸಿಗದೆ ಯೋಜನೆಯೆಲ್ಲವೂ ಸೊರಗಿತ್ತು.
ತ್ಯಾಜ್ಯ ತೆರವು ಪ್ರಗತಿ: ಮುಖ್ಯಾಧಿಕಾರಿ ಬದಲಾಗಿದ್ದು, ಈಗಿನ ಅಧಿಕಾರಿ ಸ್ವಚ್ಛತೆಯತ್ತ ಗಮನಹರಿಸುವ ಮೂಲಕ ಆರೋಗ್ಯ ನಿರೀಕ್ಷಕರ ಪ್ರಯತ್ನಕ್ಕೆ ಬಲ ತುಂಬಿದ್ದಾರೆ. ಮಳೆಗಾಲ ಸನಿಹದಲ್ಲಿರುವುದರಿಂದ ರಸ್ತೆಬದಿಯ ತ್ಯಾಜ್ಯ ತೆರವು ಕಾರ್ಯ ಆರಂಭಿಸಲಾಗಿದೆ. ಇದನ್ನೆ ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ನಿರ್ಮಾಣಗೊಂಡಿರುವ ಒಣಕಸ ವಿಲೇವಾರಿ ಘಟಕಕ್ಕೆ ಕೊಂಡೊಯ್ದು ವಿಂಗಡಿಸಿ ಸಾಗಿಸಲಾಗುತ್ತಿದೆ. ಬೇಲಿಂಗ್ ಯಂತ್ರಕ್ಕೆ ಪ್ಲಾಸ್ಟಿಕ್ ರಾಶಿ ಹಾಕಿದರೆ ರಾಶಿ ಹೋಗಿ ಸಣ್ಣ ಕಟ್ಟು ಆಗುವುದರಿಂದ ಸಾಗಾಟ ಸುಲಭವಾಗುತ್ತದೆ. ಅಧಿಕಾರಿಗಳ ಪ್ರಯತ್ನ ಫಲ ನೀಡಿದರೆ ಕೋಟೆಕಾರ್ ಸ್ವಚ್ಛ ಪಟ್ಟಣವಾಗಿ ಹೊರಹೊಮ್ಮಲಿದೆ.
ಈಗಾಗಲೇ ಮಡ್ಯಾರ್ ರಸ್ತೆಬದಿಯ ತ್ಯಾಜ್ಯ ತೆರವು ಕಾರ್ಯ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ 48 ಸೆಂಟ್ಸ್ ಜಮೀನಿನಲ್ಲಿ ಒಣ ಮತ್ತು ಹಸಿಕಸ ಬೇರ್ಪಡಿಸಲಾಗುತ್ತಿದೆ. ಬೇಲಿಂಗ್ ಯಂತ್ರ ಬಂದಿದ್ದು ಇನ್ನೂ ಕೆಲವು ಯಂತ್ರಗಳು ಬರಲಿವೆೆ.
ಮಾಲಿನಿ, ಮುಖ್ಯಾಧಿಕಾರಿ, ಕೋಟೆಕಾರ್ ಪಪಂ.
ರಸ್ತೆಬದಿ ತ್ಯಾಜ್ಯ ಎಸೆದು ಹೋಗುವುದಕ್ಕೆ ಕಡಿವಾಣ ಹಾಕಲು ಯಾವುದೇ ಪಂಚಾಯಿತಿಗಳಿಗಳಿಂದ ಸಾಧ್ಯವಾಗಿಲ್ಲ, ಅಧಿಕಾರಿಗಳು ಮತ್ತು ಸ್ಥಳೀಯಾಡಳಿತದ ಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ರಸ್ತೆಬದಿ ತ್ಯಾಜ್ಯ ನಿರ್ಮೂಲನೆ ಸಾಧ್ಯ, ಕೋಟೆಕಾರ್-ದೇರಳಕಟ್ಟೆ ನಡುವೆ ಇರುವ ತ್ಯಾಜ್ಯರಾಶಿಯಿಂದ ಪಟ್ಟಣ ಪಂಚಾಯಿತಿಯ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ.
ಮೇಗಾ ಸಲೀಂ ಅಸೈಗೋಳಿ, ದಿನಸಿ ವ್ಯಾಪಾರಿ