ಹೊನ್ನಾಳಿ: ನಿಷೇಧ ಇದ್ದರೂ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ 10 ಅಂಗಡಿಗಳ ಮೇಲೆ ಬುಧವಾರ ಪುರಸಭೆ ಅಧ್ಯಕ್ಷ ಮೈಲಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ 215 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಸಾವಿರ ದಂಡ ವಸೂಲಿ ಮಾಡಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ಪ್ರತಿದಿನವೂ ಧ್ವನಿವರ್ಧಕದ ಮೂಲಕ ಪ್ಲಾಸ್ಟಿಕ ನಿಷೇಧ ಮತ್ತು ಅದರ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಪೂರ್ಣವಾಗಿ ನಿಂತಿಲ್ಲ. ಇನ್ನು ಮುಂದೆ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಮಾಡುವವರ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಹುತೇಕ ಬೇಕರಿ, ಹಣ್ಣಿನ, ತರಕಾರಿ, ದಿನಸಿ ಅಂಗಡಿ ಹಾಗೂ ಹೊಟೇಲ್ಗಳಲ್ಲಿ ಕಳಪೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಲ್ಲಿಸದಿದ್ದರೆ ದುಪ್ಪಟ್ಟು ದಂಡ ವಿಧಿಸಿ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಹೇಳಿದರು.
ಎ ಹಾಗೂ ಬಿ ಖಾತಾ ಆಂದೋಲನ: ಪಟ್ಟಣದ ವ್ಯಾಪ್ತಿಯ ಆಸ್ತಿಗಳನ್ನು ಎ ಅಥವಾ ಬಿ ಖಾತೆಗಳನ್ನು ಮಾಡಿಸಿಕೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ನಾಗರಿಕರು ಕೂಡಲೇ ಎ ಅಥವಾ ಬಿ ಖಾತೆಯನ್ನು ಮಾಡಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಕಚೇರಿಗೆ ತಂದು ಖಾತೆ ಮಾಡಿಸಿಕೊಳ್ಳಬೇಕು. ಈಗಾಗಲೇ ಖಾತೆ ಮಾಡಿಸಿಕೊಳ್ಳಲು 80 ಅರ್ಜಿಗಳು ಬಂದಿದ್ದು, ಶೀಘ್ರವೇ ವಿಲೇವಾರಿ ಮಾಡಲಾಗುತ್ತಿದೆ. ನಾಗರಿಕರು ಖಾತಾ ಆಂದೋಲನದಲ್ಲಿ ಶೀಘ್ರವೇ ಖಾತೆ ಮಾಡಿಸಿಕೊಳ್ಳಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.
ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್ ನಾಯ್್ಕ ಕಿರಿಯ ನಿರೀಕ್ಷಕ ಸಿದ್ದೇಶ್, ಪೌರ ಕಾರ್ವಿುಕರಾದ ನಾಗರಾಜಪ್ಪ, ಉಮೇಶ್, ಅಣ್ಣಪ್ಪ ಹಾಗೂ ಸಂತೋಷ್ ಇದ್ದರು.