ಮಂಜುನಾಥ ತಿಮ್ಮಯ್ಯ ಮೈಸೂರು
ನೈಸರ್ಗಿಕ ಹಸಿರಿನ ಸಿರಿ, ಪಕ್ಷಿ-ಚಿಟ್ಟೆಗಳ ಕಲರವಕ್ಕೆ ಸಾಕ್ಷಿಯಾಗಿರುವ ಕಾರಂಜಿ ಕೆರೆಯಲ್ಲಿ ಪ್ಲಾಸ್ಟಿಕ್ ಸಾಮ್ರಾಜ್ಯ ನಿರ್ಮಾಣಗೊಂಡಿದೆ. ಇದುವೇ ಇದಕ್ಕೆ ದೊಡ್ಡ ಕಂಟಕವಾಗಿ ಅಲ್ಲಿಯ ಜೀವಜಲಗಳಿಗೂ ಮೃತ್ಯುಕೂಪದಂತಾಗಿದೆ…!
ಹಿಂದೆ ನಿರ್ವಹಣೆ, ಜೀರ್ಣೋದ್ಧಾರದಿಂದಾಗಿ ಇದು ನಗರ ಪ್ರದೇಶದ ವಿವಿಧ ಕೆರೆಗಳ ನಿರ್ವಹಣೆಗೆ ಮಾದರಿಯಾಗಿತ್ತು. ಆದರೀಗ ಕಾರಂಜಿ ಕೆರೆ ಸಹ ವಿನಾಶದತ್ತ ಮುಖ ಮಾಡಿದ್ದು, ದುಸ್ಥಿತಿಯಿಂದ ಏದುಸಿರು ಬಿಡುತ್ತಿರುವ ಕೆರೆಗಳ ಸಾಲಿಗೆ ಇದು ಸಹ ಸೇರಿಕೊಂಡಿರುವುದು ದುರಂತವೇ ಸರಿ.
ಸುಮಾರು 77 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆಯಲ್ಲಿ ವಿಹಾರ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ.
ವಿವಿಧ ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಈ ಕೆರೆ ಚಿಟ್ಟೆಗಳ ಉದ್ಯಾನದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಾಮರಾಜೇಂದ್ರ ಮೃಗಾಲಯದಲ್ಲಿ ಅಧೀನದಲ್ಲಿರುವ ಇದು ಈಗ ದುರವಸ್ಥೆಯತ್ತ ಚಲಿಸುತ್ತಿದೆ.
ಸಿದ್ಧಾರ್ಥನಗರದಿಂದ ಹರಿದು ಬರುವ ಚರಂಡಿ ನೀರು ಮತ್ತು ಒಳಚರಂಡಿಯ ಕಲುಷಿತ ನೀರಿನೊಂದಿಗೆ ಟನ್‌ಗಟ್ಟಲೇ ಪ್ಲಾಸ್ಟಿಕ್ ಸಹ ಕೆರೆಯನ್ನು ಸೇರುತ್ತಿದೆ. ಕೆರೆ ಬಳಿ ಅಡ್ಡಲಾಗಿ ನಿರ್ಮಿಸಿರುವ ಗೇಟ್ ಆಸುಪಾಸಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ರಾಶಿ ಕಣ್ಣಿಗೆ ಕುಕ್ಕುತ್ತಿದೆ. ಅದು ಕೆರೆಯ ಒಳಗೂ ನುಸುಳಿಕೊಂಡು ಹೇಗಿದೆ. ಕೆರೆ ದಂಡೆ ಸಾಗುತ್ತಿದ್ದರೆ ಈ ಕಸ ಗೋಚರವಾಗುತ್ತಿದೆ. ಇದುವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ರಾಶಿ ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದು, ಇಲ್ಲಿಯ ಸೌಂದರ್ಯಕ್ಕೂ ಕಪ್ಪು ಚುಕ್ಕೆ ಎನಿಸಿದೆ.
ತ್ವರಿತವಾಗಿ ಈ ಸಮಸ್ಯೆ ಪರಿಹಾರ ಕಂಡುಕೊಂಡು ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ಉಳಿಸಿಕೊಂಡರೆ ಇದಕ್ಕೆ ಭವಿಷ್ಯವಿದೆ. ಇಲ್ಲವಾದರೆ, ಅವಸಾನದತ್ತ ಸಾಗುವುದು ನಿಶ್ಚಿತ ಎಂದು ಪರಿಸರವಾದಿಗಳ ಆತಂಕವಾಗಿದೆ.
ಕೆರೆಗೆ ಚರಂಡಿ ನೀರು ಪ್ರವೇಶಿಸುವ ಜಾಗದಲ್ಲಿ ಕಬ್ಬಿಣದ ಜಾಲರಿ ಹಾಕಿಲ್ಲ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಸಲೀಸಾಗಿ ಕೆರೆಗೆ ಸೇರಿಕೊಳ್ಳುತ್ತಿದೆ. ಇದನ್ನು ತಪ್ಪಿಸಲು ಈ ಹಿಂದೆ ಕಬ್ಬಿಣದ ಜಾಲರಿಯನ್ನು ಹಾಕಲಾಗಿತ್ತು. ಈ ಭಾಗದಲ್ಲಿ ಪ್ಲಾಸ್ಟಿಕ್ ಕಸ ತುಂಬಿಕೊಂಡು ಮಳೆ ನೀರು ಸುಲಭವಾಗಿ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನೀರು ಹಿಮ್ಮುಖವಾಗಿ ಚಲಿಸಿ ಸಿದ್ಧಾರ್ಥನಗರದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತದೆ. ಹೀಗಾಗಿ, ಈ ಕಬ್ಬಿಣದ ಜಾಲರಿಯನ್ನು ತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಚಾಮುಂಡಿಬೆಟ್ಟದ ತಪ್ಪಲಿನಿಂದ ರಾಜಕಾಲುವೆ ಮಾರ್ಗವಾಗಿ ಇಲ್ಲಿಗೆ ನೀರು ಹರಿದು ಬರುತ್ತದೆ. ಈ ಭಾಗದಲ್ಲಿ ಈ ಸಮಸ್ಯೆ ಸೃಷ್ಟಿಯಾಗಿಲ್ಲ. ಕಬ್ಬಿಣ ಜಾಲರಿ ಹಾಕಿರುವುದರಿಂದ ಪ್ಲಾಸ್ಟಿಕ್ ಕಸ ಕೆರೆ ಪ್ರವೇಶಿಸುವ ಮುನ್ನವೇ ತಡೆಯುವ ಕೆಲಸವಾಗಿದೆ. ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಆದರೆ, ಇದೇ ವ್ಯವಸ್ಥೆ ಸಿದ್ಧಾರ್ಥನಗರದಿಂದ ನೀರು ಸೇರುವ ಜಾಗದಲ್ಲಿ ಇಲ್ಲ. ಇದುವೇ ಸಮಸ್ಯೆಯಾಗಿ ಕಾಡುತ್ತಿದೆ.
ಕೆರೆಯ ನೀರಿನಲ್ಲೇ ಜೊಂಡು, ಹೊನಗೊನೆ ಸೊಪ್ಪು ಹಾಗೂ ಚೆಂಬೆ ಬಳ್ಳಿ ಸೇರಿದಂತೆ ಇನ್ನಿತರ ಗಿಡಗಂಟಿಗಳು ಯಥೇಚ್ಛವಾಗಿ ಬೆಳೆದಿದೆ. ಕೆರೆಯನ್ನು ಚೆಂಬೆ ಬಳ್ಳಿ ಕೆರೆಯ ಬಹುಪಾಲು ಆವರಿಸಿಕೊಂಡಿದೆ. ಇದರಿಂದ ಕೆರೆಯ ಕೆಲ ಭಾಗದಲ್ಲಿ ನೀರು ತುಂಬಿರುವುದು ಕಾಣದಂತಾಗಿದೆ. ಅಲ್ಲದೆ ಕೆರೆಯ ನೀರು ವಾಸನೆ ಬೀರಲಾರಂಭಿಸಿದೆ. ಕೆರೆ ಮಧ್ಯಭಾಗ ಹಾಗೂ ಅಂಚಿನಲ್ಲಿ ಗಿಡಗಳು ಬೆಳೆದಿವೆ. ಹತ್ತಾರು ಮೀಟರ್ ಉದ್ದದ ಬಳ್ಳಿಗಳು ಒಂದಕ್ಕೊಂದು ಸುರುಳಿ ಸುತ್ತಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕೆರೆ ವಾತಾವರಣ ಉತ್ತಮಪಡಿಸುವ ನಿಟ್ಟಿನಲ್ಲಿ ನೀರಿನಲ್ಲಿರುವ ಬಳ್ಳಿ, ಹೊನಗೊನೆ ಸೊಪ್ಪು ತೆರವುಗೊಳಿಸುವ ಕೆಲಸ ಆಗಬೇಕಿದೆ.
ಮೀನು ಸೇರಿದಂತೆ ಕೆಲ ಜಲಚರಗಳು ಹೊನಗೊನೆ ಸೊಪ್ಪನ್ನೂ ತಿನ್ನುತ್ತವೆ. ಆದ್ದರಿಂದ ನಿಯಮಾನುಸಾರ ಕೆಲ ಭಾಗದಲ್ಲಿ ಗಿಡಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕಾಗುತ್ತದೆ. ತಾವರೆ ಹೂವು ಬೆಳೆದರೆ ಕೆರೆಯಲ್ಲಿರುವ ನೀರು ಶುದ್ಧವಾಗಿದೆ ಎಂದರ್ಥ. ಐಕಾರ್ನಿಯಾ ಗಿಡ ಬೆಳೆದರೆ ನೀರು ಮಲಿನಗೊಂಡಿದೆ ಎಂದರ್ಥ. ಆದರೀಗ ಕಾರಂಜಿಕೆರೆಯಲ್ಲಿ ಜಲಚರಗಳ ಪೂರಕವಾದ ವಾತಾವರಣಕ್ಕೂ ಆಪತ್ತು ಎದುರಾಗಿದೆ.
ಮೈಸೂರು ಮೃಗಾಲಯದ ಹಿಂಭಾಗದಲ್ಲಿರುವ ಈ ಕೆರೆಯನ್ನು ಕುಡಿಯುವ ನೀರಿನ ಸಲುವಾಗಿ ಸುಮಾರು 100 ವರ್ಷಗಳ ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿದ್ದರು. 2004ರಲ್ಲಿ ಈ ಕೆರೆಯನ್ನು ಮೃಗಾಲಯ ವ್ಯಾಪ್ತಿಗೆ ತರಲಾಯಿತು. ಬಳಿಕ ಉಚಿತ ಪ್ರವೇಶದ ಬದಲು ಪ್ರವೇಶ ದರ ನಿಗದಿಪಡಿಸಲಾಯಿತು. ಇದರಿಂದ ಆದಾಯವೂ ಹರಿದು ಬರುತ್ತಿದೆ. ಕೆಲ ವರ್ಷಗಳ ಹಿಂದೆ ಕೆರೆಯನ್ನು ಪುನರುಜ್ಜೀವನಗೊಳಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವಿವಿಧ ಬಗೆಯ ಚಿಟ್ಟೆಗಳು, ಚಿಕ್ಕ ಸಸ್ತನಿಗಳು, ಒಳ್ಳೆಯ ತಂಪಾದ ಪ್ರವಾಸಿ ತಾಣವಾಗಿರುವ ಈ ಕೆರೆಯಲ್ಲಿ ಜಲವಿಹಾರಕ್ಕೂ ಪ್ರಮುಖ ಆಕರ್ಷಣೆ.
ಕಳೆದ ಕೆಲ ವರ್ಷ ಹಿಂದೆ ಈ ಕೆರೆ ಬರಿದಾಗಿತ್ತು. ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಹೂಳೆತ್ತಲಾಯಿತು. ಬಳಿಕ ಇದು ಜೀವಕಳೆ ಪಡೆದುಕೊಂಡಿತ್ತು. ಆದರೀಗ ಪ್ಲಾಸ್ಟಿಕ್ ಕಸದ ದೊಡ್ಡ ಸಮಸ್ಯೆ ಉಲ್ಭಣವಾಗಿದೆ. ಈ ಕೆರೆ ಉಳಿವಿನಿಂದ ಹಸಿರೀಕರಣಗೊಂಡು ಶುದ್ಧಗಾಳಿ, ಪ್ರಾಣಿ-ಪಕ್ಷಗಳಿಗೆ ಆವಾಸ ತಾಣ, ಅಂತರ್ಜಲ ಮಟ್ಟವೃದ್ಧಿ, ಬಾವಿಗಳು-ಕೊಳವೆಬಾವಿಗಳಿಗೆ ಜೀವನೆಲೆ ಬರಲಿದ್ದು, ಆದ್ದರಿಂದ ಇದರ ಸಂರಕ್ಷಣೆಗಾಗಿ ತ್ವರಿತವಾಗಿ ಕ್ರಮ ವಹಿಸಬೇಕಿದೆ.
ಸಿದ್ಧಾರ್ಥನಗರದ ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ ಬಳಿ ಕಾರಂಜಿ ಕೆರೆಗೆ ಕಲ್ಪಿಸಿರುವ 2ನೇ ಪ್ರವೇಶ ದ್ವಾರದ ವ್ಯವಸ್ಥೆ ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದವರು ಕಾರಂಜಿ ಕೆರೆಗೂ ಬರಲಿ ಎಂಬ ಆಶಯದಿಂದ ಈ ಉಪಕ್ರಮವನ್ನು ಕೈಗೊಳ್ಳಲಾಗಿತ್ತು. ಆದರೆ, ಈ ಗೇಟ್‌ನಿಂದ ದಿನಕ್ಕೆ 6-7 ಜನರು ಮಾತ್ರ ಬರುತ್ತಿದ್ದಾರೆ. ವಾರಾಂತ್ಯ ಸಂದರ್ಭದಲ್ಲಿ ಈ ಸಂಖ್ಯೆ ಸಾವಿರ ದಾಟುತ್ತದೆ. ಉಳಿದ ದಿನಗಳಲ್ಲಿ ಇಲ್ಲಿರುವ ಒಬ್ಬ ಸಿಬ್ಬಂದಿಗೆ ಕೆಲಸವೇ ಇರಲ್ಲ. ಪ್ರವಾಸಿಗರನ್ನು ಎದುರು ನೋಡುತ್ತಾ ಕಾಯ್ದು ಕುಳಿತಿರುತ್ತಾರೆ.
ಸಿದ್ಧಾರ್ಥನಗರದಿಂದ ಬರುವ ಪ್ಲಾಸ್ಟಿಕ್ ತಡೆಯಲು ಕೆರೆ ದಡೆಯಲ್ಲೇ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕಸವನ್ನು ನಿಯಮಿತವಾಗಿ ತೆರವುಗೊಳಿಸಲಾಗುತ್ತಿದೆ. ಆದರೆ, ಅಧಿಕ ಪ್ರಮಾಣದಲ್ಲಿ ಮಳೆಯಾದಾಗ ಬ್ಯಾರಿಕೇಡ್ ಮೇಲೆ ನೀರು ಉಕ್ಕಿ ಹರಿದು ಪ್ಲಾಸ್ಟಿಕ್ ಸಹ ಕೆರೆಗೆ ಸೇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಹೀಗಾಗಿ, ಮೈಸೂರು ಮಹಾನಗರ ಪಾಲಿಕೆಗೆ ಈ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವಂತೆ ಕೋರಿಕೊಳ್ಳಲಾಗಿದೆ.ಮಹೇಶ್‌ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕಶ್ರೀ ಚಾಮರಾಜೇಂದ್ರ ಮೃಗಾಲಯ