ಶ್ರೀನಿವಾಸಪುರ: ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಪುರಸಭೆ ಆಡಳಿತಾಧಿಕಾರಿ ಶರೀನ್ತಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಪ್ಲಾಸ್ಟಿಕ್ಮುಕ್ತ ನಗರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ಬಳಸುವ ಪ್ಲಾಸ್ಟಿಕ್ ಗಾಳಿ, ನೀರು, ಆಹಾರದ ಮೂಲಕ ನಮ್ಮ ದೇಹ ಸೇರಿ ನಮ್ಮನ್ನು ಅನಾರೋಗ್ಯಕ್ಕೀಡು ಮಾಡುತ್ತದಲ್ಲದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ವರ್ತಕರು, ಹೋಟೆಲ್ ಮಾಲೀಕರು, ಬೀದಿ ವ್ಯಾಪಾರಸ್ಥರಿಗೆ ಹಾಗೂ ನಾಗರಿಕರಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮನಮ್ಮಮನೆಗಳ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನಮ್ಮ ಕಾಲನಿ, ಪಟ್ಟಣದಲ್ಲೂ ಕಸ ಬೀಳದಂತೆ ನೋಡಿಕೊಳ್ಳಬೇಕು. ಮನುಷ್ಯನ ಅಸ್ತಿತ್ವಕ್ಕೆ ಪರಿಸರ ರಕ್ಷಣೆ ಮಹತ್ವದಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸುಸ್ಥಿರ ಮೂಲಸೌಕರ್ಯಗಳ ಅಭಿವೃದ್ಧಿ ಉತ್ತೇಜಿಸಲು ಹಾಗೂ ಪರಿಸರ ಸ್ನೇಹಿ ಸಾಮಗ್ರಿ ಬಳಸುವ ಮೂಲಕ ಪ್ಲಾಸ್ಟಿಕ್ಮುಕ್ತ ನಗರ ಅಭಿಯಾನ ಯಶಸ್ವಿಗೊಳಿಸಬೇಕು. ಇದು ನಾಗರಿಕರ ಜವಾಬ್ದಾರಿ ಎಂದರು.
ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ನೋಟಿಸ್: ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪ್ರತಿನಿತ್ಯ ಮುಂಜಾನೆಯಿಂದ ಸಂಜೆಯವರೆಗೂ ಹಾಲು, ಸೊಪು$್ಪ, ತರಕಾರಿ, ದವಸಧಾನ್ಯಗಳನ್ನು ಖರೀದಿಸಲು ಅಂಗಡಿಗೆ ಬರುವ ಗ್ರಾಹಕರಿಗೆ ಪರಿಸರ ಸ್ನೇಹಿ ಬಟ್ಟೆ, ಚೀಲಗಳನ್ನು ತರುವಂತೆ ಮಾಲೀಕರು ತಿಳಿ ಹೇಳಬೇಕು. ಈ ಬಗ್ಗೆ ಹಲವು ಬಾರಿ ಜಾಗೃತಿ ಮೂಡಿಸಿದರೂ ವರ್ತಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನುಮುಂದೆ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಿ ಅಂಗಡಿಯನ್ನು ಸೀಜ್ ಮಾಡಲಾಗುವುದು. ಪಟ್ಟಣವನ್ನು ಪ್ಲಾಸ್ಟಿಕ್ಮುಕ್ತಗೊಳಿಸಿಸಲು ಸಹಕರಿಸಬೇಕು ಎಂದರು.
ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್ ಮಾತನಾಡಿ, ಪಟ್ಟಣದಲ್ಲಿ ಒಟ್ಟು 724 ನೋಂದಾಯಿತ ಅಂಗಡಿಗಳಿದ್ದು, ಎಲ್ಲ ಅಂಗಡಿಗಳ ಮಾಲೀಕರಿಗೂ ಪ್ಲಾಸ್ಟಿಕ್ ಬಳಸದಂತೆ ಸೂಚಿಸಲಾಗಿದೆ. ಜು.22ರ ನಂತರ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಪ್ಲಾಸ್ಟಿಕ್ ಬದಲು ಪೇಪರ್ ಅಥವಾ ಬಟ್ಟೆ ಚೀಲಗಳನ್ನು ಬಳಸಿ ಎಂದರು. ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಸೂರ್ಯನಾರಾಯಣಶೆಟ್ಟಿ ವರ್ತಕರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿ ನಾಗರಾಜ್, ನಿರೀಕ್ಷಕ ಶಂಕರ್ ಹಾಗೂ ವರ್ತಕರು, ಹೋಟೆಲ್ ಮಾಲೀಕರು ಇದ್ದರು.