ಗಂಗಾವತಿ ಬಸವಣ್ಣ ವೃತ್ತದ ಬಳಿ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಆರೋಗ್ಯ ಮತ್ತು ನೈರ್ಮಲ್ಯ ನಿರೀಕ್ಷಕರ ತಂಡ ಗುರುವಾರ ವಶಪಡಿಸಿಕೊಂಡಿತು.  
ಜಿಲ್ಲೆ

ಪ್ಲಾಸ್ಟಿಕ್ ನಿಷೇಧಕ್ಕೆ ಸ್ಪಂದಿಸದಿದ್ದರೆ ಉದ್ಯಮಿ ಲೈಸೆನ್ಸ್ ರದ್ದು

ಗಂಗಾವತಿ: ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ನಿಷೇಧಕ್ಕಾಗಿ ಅಭಿಯಾನ ಹಮ್ಮಿಕೊಂಡಿದ್ದು, ವಹಿವಾಟು ಕೇಂದ್ರಗಳಲ್ಲಿ ಮಾರಾಟವಾಗದಂತೆ ನಿಗಾವಹಿಸಲಾಗುತ್ತಿದೆ ಎಂದು ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಹೇಳಿದರು.

ಪ್ಲಾಸ್ಟಿಕ್ ನಿಷೇಧಕ್ಕಾಗಿ ನಗರದ ವಿವಿಧೆಡೆ ಆರೋಗ್ಯ ಮತ್ತು ನೈರ್ಮಲ್ಯ ನಿರೀಕ್ಷಕರ ತಂಡ ಗುರುವಾರ ನಡೆಸಿದ ದಾಳಿ ಸಂದರ್ಭದಲ್ಲಿ ಮಾತನಾಡಿದರು. ಮೊದಲ ಹಂತದಲ್ಲಿ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದು, ನೋಟಿಸ್ ಜಾರಿ ಮಾಡಲಾಗಿದೆ. ಸ್ಪಂದಿಸದ ಅಂಗಡಿಕಾರರ ಮೇಲೆ ದಾಳಿ ನಡೆಸಿ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಗ್ಲಾಸ್ ಇತರ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಎರಡು ದಿನಗಳಲ್ಲಿ 60 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಸ್ಪಂದಿಸದಿದ್ದರೆ ಮಾಲೀಕರಿಗೆ ದಂಡ ಹಾಕುವುದರ ಜತೆಗೆ ಉದ್ಯಮಿ ಲೈಸೆನ್ಸ್ ರದ್ದುಪಡಿಸಲಾಗುವುದು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ನಿಷೇಧಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.

ನಗರದ ಬಸವಣ್ಣ ವೃತ್ತದಿಂದ ಗಾಂಧಿ ವೃತ್ತದವರೆಗೂ ಕಾರ್ಯಾಚರಣೆ ನಡೆಸಿದ ತಂಡ. ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ವಶಪಡಿಸಿಕೊಂಡು, ಮಾರಾಟ ಮಾಡದಂತೆ ಮಾಲೀಕರಲ್ಲಿ ಜಾಗೃತಿ ಮೂಡಿಸಿತು. ನೈರ್ಮಲ್ಯ ನಿರೀಕ್ಷಕರಾದ ಎಸ್.ಶೋಭಾ, ಅಕ್ಕಮಹಾದೇವಿ ಬಣಗಾರ್, ಸಹಾಯಕರಾದ ಸಲೀಂ, ರಾಮಣ್ಣ ಇತರರಿದ್ದರು.