ಜಿಲ್ಲೆ

ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮದಲ್ಲೇ ಬಿತ್ತು 12 ಸಾವಿರ ರೂ. ದಂಡ

Mysuru

ಮೈಸೂರು: ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಗುರುವಾರ ಅಖಿಲ ಭಾರತ ಗ್ರಾಹಕ ಪಂಚಾಯತ್ ಮೈಸೂರು ವಿಭಾಗದಿಂದ ನಗ ರದ ವಿವಿಧ ಮಾರುಕಟ್ಟೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿಯೇ ನಗರ ಪಾಲಿಕೆಯಿಂದ ದೇವರಾಜ ಮಾರುಕಟ್ಟೆಯಲ್ಲಿ ವರ್ತಕರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಬರೋಬ್ಬರಿ 12 ಸಾವಿರ ರೂ. ದಂಡ ವಿಧಿಸಲಾಯಿತು.

ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆ, ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಕೆ.ಟಿ. ಸ್ಟ್ರೀಟ್, ಲ್ಯಾನ್ಸ್‌ಡೌನ್ ಕಟ್ಟಡ, ಹಳೆ ಸಂತೆಪೇಟೆ ಸೇರಿದಂತೆ ವಿವಿಧೆಡೆ ಜಾಗೃತಿ ಕಾರ್ಯಕ್ರಮ ನಡೆಯಿತು. ಎಂ.ಜಿ. ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಜನರಿಗೆ ಬಟ್ಟೆ ಬ್ಯಾಗ್ ವಿತರಿಸಿ ಮಾತನಾಡಿದ ಪಾಲಿಕೆ ಆರೊಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್, ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಹಾಗೂ ಬಟ್ಟೆ ಬ್ಯಾಗ್‌ಗಳನ್ನು ಬಳಸಿ ಪರಿಸರ ಉಳಿವಿಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಕೆ.ಆರ್. ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಚಯ್ಯ, ದೇವರಾಜ ಮಾರುಕಟ್ಟೆ ಆರೋಗ್ಯ ನಿರೀಕ್ಷಕಿ ತೇಜಶ್ವಿನಿ, ನಗರಪಾಲಿಕೆ ಸದಸ್ಯ ಜಗದೀಶ, ಅಖಿಲ ಭಾರತ ಗ್ರಾಹಕ ಪಂಚಾಯಿತಿ ಮೈಸೂರು ಘಟಕ ಅಧ್ಯಕ್ಷ ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಪ್ರಚಾರ ಪ್ರಮುಖ್ ಸುಮಾ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಹಾಗೂ ಇತರರು ಇದ್ದರು.