ಮಡಿಕೇರಿ: ಮಡಿಕೇರಿ ನಗರದ ಹೊರ ವಲಯದ ಕೊಡಗು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಆರ್ಟಿಫಿಶಿಯಲ್ ರಿಜನರೇಷನ್ ಮಾದರಿಯಲ್ಲಿ ಭೂಕುಸಿತ ಹಾಗೂ ಬರೆ ಕುಸಿಯುವ ಜಾಗದಲ್ಲಿ ಔಷಧೀಯ ಗುಣ ಹಾಗೂ ಬಹುಪಯೋಗಿ ಹೊಂದಿರುವ ಲಾವಂಚ(ಕಸ್ಸ್ ಗ್ರಾಸ್) ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಇತ್ತೀಚೆಗೆ ಜಿಲ್ಲಾ ಪಂಚಾಯತಿ ಸಿಇಒ ಡಾ.ಎಸ್.ಆಕಾಶ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಛೇರಿಯ ಗುಡ್ಡದ ಸುತ್ತಲಿನ ಇಳಿಜಾರು ಪ್ರದೇಶದಲ್ಲಿ ೧೬೦೦ ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಉದ್ದೇಶ ಹೊಂದಿರುವ ಸ್ಥಳದಲ್ಲಿ ಅಧಿಕಾರಿಗಳು, ಸ್ವಯಂಸೇವಕರು ಜತೆಗೂಡಿ ಸಸಿನೆಟ್ಟರು.
ಈ ಸಂದರ್ಭ ಮಾತನಾಡಿದ ಜಿ..ಸಿಇಓ ಡಾ.ಎಸ್.ಆಕಾಶ್, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಹಸಿರು ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು. ನಾವು ಪರಿಸರವನ್ನು ಸಂರಕ್ಷಿಸಿದರೆ, ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ ಎಂದರು.
ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಿಕೊಳ್ಳುವ ದಿಸೆಯಲ್ಲಿ ನಾವು ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ಕಾಪಾಡಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ನ ಜಿಲ್ಲಾ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಾವು ನೆಟ್ಟ ಗಿಡಗಳ ಸಂಪೋಷಿಸಿ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ, ಸಂಯೋಜಕಿ ಯು.ಸಿ.ದಮಯಂತಿ, ಜಿ.ಪಂ. ಉಪ ಕಾರ್ಯದರ್ಶಿ ಧನಂಜಯ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಂಗಪ್ಪ, ವಲಯ ಅರಣ್ಯ ಅಧಿಕಾರಿ ಮಯೂರ್ ಕಾರವೇಕರ, ಉಪ ವಲಯ ಅರಣ್ಯ ಅಧಿಕಾರಿ ಎಂ.ಜಿ.ದರ್ಶಿನಿ, ಗಸ್ತು ಅರಣ್ಯಪಾಲಕ ಬಿ.ಪಿ.ಚಂದ್ರಾವತಿ ಹಾಗೂ ಅರಣ್ಯ ಇಲಾಖೆಯ, ಜಿಲ್ಲಾ ಪಂಚಾಯತಿ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.