ಜಿಲ್ಲೆ

ಶಾಲೆಯಲ್ಲಿ 751 ಅಡಕೆ ಗಿಡ ನಾಟಿ

ಕಡಬ: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಡಬ ತಾಲೂಕು ಪುಣ್ಚಪ್ಪಾಡಿ ಸರ್ಕಾರಿ ಶಾಲೆಯ ಎರಡು ಎಕರೆ ಜಾಗದಲ್ಲಿ 751 ಅಡಕೆ ಗಿಡ ನಾಟಿ ಮಾಡಲಾಗಿದ್ದು, ಹಸಿರು ದಾನವೆಂಬ ಧ್ಯೇಯದಡಿ ದಾನಿಗಳ ನೆರವಿನಿಂದ ಈ ಕಾರ್ಯ ನಡೆದಿದೆ.

1927ರಲ್ಲಿ ಪ್ರಾರಂಭಗೊಂಡು 97 ಸಂವತ್ಸರ ದಾಟಿ ನಿಂತ ಈ ಶಾಲೆಯೀಗ ಶತಮಾನದ ಹೊಸ್ತಿಲಲ್ಲಿದೆ. ಈ ಶಾಲೆಯ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುವ ನೆಲೆಯಲ್ಲಿ ಈ ಊರು ಈಗಲೇ ಸನ್ನದ್ಧವಾಗಿದೆ. ಅಡಕೆ ಗಿಡ ನೆಡಲು ತಲಾ 100 ರೂ.ನಂತೆ ಹಸಿರು ದಾನದ ಯೋಜನೆ ಹಾಕಿ ಇದೀಗ 751 ಗಿಡಗಳ ಅಡಕೆ ತೋಟ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲಾ ಆರ್ಥಿಕ ಚೈತನ್ಯಕ್ಕೆ ನೆರವಿನ ದೃಷ್ಟಿಯಿಂದ ಈ ಯೋಜನೆ ಹಾಕಿಕೊಳ್ಳಲಾಗಿದೆ.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ.ಕೃಷ್ಣ ಕುಮಾರ್ ರೈ, ಹಿರಿಯರಾದ ಕೃಷ್ಣ ರೈ ಪುಣ್ಚಪ್ಪಾಡಿ ಮಾರ್ಗದರ್ಶನದಲ್ಲಿ, ಸವಣೂರು ಗ್ರಾಪಂ ಸದಸ್ಯ ಗಿರಿಶಂಕರ ಸುಲಾಯ ಮುಂದಾಳುತ್ವ ಹಾಗೂ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರೀಶ್ ತೋಟತ್ತಡ್ಕ ನೇತೃತ್ವದಲ್ಲಿ ಶ್ರಮದಾನದ ಮೂಲಕ ಅಡಕೆ ಗಿಡಗಳನ್ನು ನಾಟಿ ಮಾಡಲಾಗಿದೆ. ಪ್ರಸ್ತುತ ಸವಣೂರು ಗ್ರಾಪಂ ವತಿಯಿಂದ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಪಿ.ಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಧಾಕೃಷ್ಣ ದೇವಸ್ಯ, ಮುಖ್ಯಶಿಕ್ಷಕಿ ರಶ್ಮಿತಾ ನರಿಮೊಗರು ಮೊದಲಾದವರ ಸಹಕಾರವಿದೆ.

ಶತಮಾನದ ಹೊಸ್ತಿಲಲ್ಲಿ ಇರುವ ಪುಣ್ಚಪ್ಪಾಡಿ ಶಾಲೆಗೆ ಆರ್ಥಿಕ ಶಕ್ತಿ ರೂಪುಗೊಳ್ಳಬೇಕೆಂಬ ನಿಟ್ಟಿನಲ್ಲಿ ಊರಿನ ಎಲ್ಲರ ಸಹಕಾರದಿಂದ 2 ಎಕರೆ ಪ್ರದೇಶದಲ್ಲಿ ಅಡಕೆ ತೋಟ ನಿರ್ಮಾಣವಾಗಿದೆ. - ಗಿರಿಶಂಕರ ಸುಲಾಯ ಗ್ರಾಪಂ ಸದಸ್ಯ ನಮ್ಮೂರ ಶಾಲೆ ಇತರ ಶಾಲೆಗಳಿಗೆ ಮಾದರಿಯಾಗಿ ಇರಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯಕ್ರಮ ನಡೆಯುತ್ತಿದೆ. ಇದೀಗ ಸುಮಾರು 751 ಅಡಕೆ ಗಿಡಗಳ ತೋಟ ನಿರ್ಮಾಣವಾಗಿದೆ. ಇದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. - ಹರೀಶ್ ತೋಟತ್ತಡ್ಕ ಉಪಾಧ್ಯಕ್ಷ ಹಳೇ ವಿದ್ಯಾರ್ಥಿ ಸಂಘ https://www.vijayavani.net/shri-krishna-anugrah-award-to-vaman-rao-baikal https://www.vijayavani.net/annual-nema-at-shibarur