ಅನ್ಸಾರ್ ಇನೋಳಿ ಉಳ್ಳಾಲ
ಕೆಲವು ದಿನಗಳ ಹಿಂದೆ ಸೋಮೇಶ್ವರ ಕಡಲ ಕಿನಾರೆಯಲ್ಲಿದ್ದ ಮರಗಳನ್ನು ಕಡಿದಿದ್ದ ಅರಣ್ಯ ಇಲಾಖೆ ಪರಿಸರ ಪ್ರೇಮಿಯೊಬ್ಬರ ಒತ್ತಾಯಕ್ಕೆ ಸ್ಪಂದಿಸಿ, ಅದೇ ಜಾಗದಲ್ಲಿ ಮತ್ತೆ 7-8 ಅಡಿ ಎತ್ತರದ ಗಿಡಗಳನ್ನು ನೆಡುವ ಮೂಲಕ ಹಸಿರೀಕರಣಕ್ಕೆ ಮುಂದಡಿ ಇಟ್ಟಿದೆ.
ಹಲವು ವರ್ಷಗಳ ಹಿಂದೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ಅರಣ್ಯ ಇಲಾಖೆಯಿಂದಲೇ ನೆಡಲಾಗಿದ್ದ ಗಾಳಿ ಮತ್ತು ನೆರಳನ್ನೂ ನೀಡುತ್ತಿದ್ದ ಹೊನ್ನೆ ಹಾಗೂ ಗಾಳಿಮರಗಳು ಮರಕಳ್ಳರ ಕಾಟದಿಂದಾಗಿ ಭಾಗಶಃ ಕಳವಾಗಿದ್ದವು. ದೇವಸ್ಥಾನದ ಗದಾತೀರ್ಥದ ಸನಿಹದಲ್ಲಿರುವ ಕಡಲ ಕಿನಾರೆಯಲ್ಲಿ ಅಳಿದುಳಿದ ಬೃಹತ್ ಮರಗಳು ಇಲ್ಲಿಗೆ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತಿತ್ತಾದರೂ ಜೂನ್ 18ರಂದು ಅರಣ್ಯ ಇಲಾಖೆಯ ಸುಪರ್ದಿಯಲ್ಲೇ ಐದು ಗಾಳಿ ಮರಗಳನ್ನು ಕಡಿಸಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಜೂನ್ 21ರ ವಿಜಯವಾಣಿಯಲ್ಲಿ ವರದಿಯನ್ನೂ ಪ್ರಕಟಿಸಲಾಗಿತ್ತು.
ಪರಿಸರ ಪ್ರೇಮಿಯ ಫಾಲೋಅಪ್ !
ಅರಣ್ಯ ಇಲಾಖೆಯ ಉಸ್ತುವಾರಿಯಲ್ಲೇ ಗಾಳಿಮರಗಳನ್ನು ಕಡಿದಿರುವ ಬಗ್ಗೆ ಪರಿಸರ ಪ್ರೇಮಿಗಳು ಬೇಸರಗೊಂಡು ಇಲಾಖೆಯನ್ನು ಪ್ರಶ್ನಿಸಿದ್ದರು. ಆದರೆ ದಿನೇಶ್ ನಡಾರ್ ಎಂಬುವರು ಕಡಿದ ಜಾಗದಲ್ಲಿ ಮಾತ್ರವಲ್ಲದೆ ಆಸುಪಾಸಿನಲ್ಲೂ ಉತ್ತಮ ಗಾತ್ರದ ಗಿಡಗಳನ್ನು ನೆಡುವಂತೆ ಮನವಿ ಮಾಡುತ್ತಾ ಬಂದಿದ್ದಲ್ಲದೆ, ಮೇಲಧಿಕಾರಿಗಳಿಗೆ ಈಮೇಲ್ ಮೂಲಕವೂ ಲಿಖಿತ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಇಲಾಖೆಯ ಅಧಿಕಾರಿಗಳು 100 ಹೊನ್ನೆ ಗಿಡಗಳನ್ನು ಸೋಮೇಶ್ವರಕ್ಕೆ ಕಳುಹಿಸಿದ್ದು, ಈಗಾಗಲೇ 50ರಷ್ಟು ಗಿಡಗಳನ್ನು ನೆಡಲಾಗಿದೆ.
ಜಾಗದ ಕೊರತೆ: ಅರಣ್ಯ ಇಲಾಖೆಯಿಂದ 7-8 ಅಡಿ ಎತ್ತರದ ನೂರು ಗಿಡಗಳನ್ನು ಸೋಮೇಶ್ವರಕ್ಕೆ ತರಲಾಗಿತ್ತು. ಗದಾತೀರ್ಥ ಕೆರೆಯ ಬಳಿ, ಕಡಲ ಕಿನಾರೆ ಮತ್ತು ಸಾರ್ವಜನಿಕ ಶೌಚಗೃಹದ ಹಿಂಭಾಗದಲ್ಲಿ 50ರಷ್ಟು ಗಿಡಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಗಿಡಗಳನ್ನು ನೆಡಲು ಜಾಗದ ಕೊರತೆ ಎದುರಾಗಿದೆ.
ಪ್ರವಾಸಿಗರ ಆಕರ್ಷಣೆಗೆ ಯೋಜನೆ
ಸೋಮೇಶ್ವರ ಸಮುದ್ರ ಅಪಾಯಕಾರಿಯಾದರೂ ತೀರ ಪ್ರದೇಶ ಮಾತ್ರ ಆಕರ್ಷಣೀಯವಾಗಿದೆ. ಒಂದೆಡೆ ಎತ್ತರದಲ್ಲಿರುವ ಇತಿಹಾಸ ಪ್ರಸಿದ್ಧ ಸೋಮನಾಥ ದೇವಸ್ಥಾನ, ಹಿಂಭಾಗದಲ್ಲಿರುವ ಗದಾತೀರ್ಥ ದೇವರ ಕೆರೆ, ಇನ್ನೊಂದು ಭಾಗದಲ್ಲಿ ರಾಣಿಕೆರೆ, ಮತ್ತೊಂದು ಭಾಗದಲ್ಲಿ ಕಡಲ ಕಿನಾರೆ ಮತ್ತು ರುದ್ರಪಾದೆ. ಹೀಗೆ ದೇವಳದ ಸುತ್ತಲೂ ಒಂದೊಂದು ರೀತಿಯ ವೈಶಿಷ್ಟೃಗಳಿವೆ. ಶಿವನ ಸನ್ನಿಧಿ ಆಗಿರುವುದರಿಂದ ವರ್ಷಕ್ಕೊಮ್ಮೆ ನಡೆಯುವ ತೀರ್ಥ ಅಮಾವಾಸ್ಯೆ, ಪಿಂಡ ಪ್ರದಾನಕ್ಕೂ ಇಲ್ಲಿ ಸಾಕಷ್ಟು ಜನ ಬರುತ್ತಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವಂತಹ ಯಾವುದೇ ಯೋಜನೆ ಇಲ್ಲಿಗೆ ಬಂದಿಲ್ಲ. ಈ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಆಶ್ರಯದಲ್ಲಿ ಸಮಾಲೋಚನಾ ಸಭೆಯೂ ನಡೆದಿದೆ. ಇದೀಗ ಅರಣ್ಯ ಇಲಾಖೆ ಹಸಿರೀಕರಣಕ್ಕೆ ಮುಂದಾಗಿದ್ದು ಇದೇ ವೇಳೆ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನೂ ಕಾರ್ಯಗತಗೊಳಿಸಬೇಕೆಂದು ಆಗ್ರಹವೂ ಸಾರ್ವಜನಿಕವಾಗಿ ಕೇಳಿ ಬಂದಿದೆ.
ಉಳ್ಳಾಲ ತಾಲೂಕಿನಲ್ಲಿ ಈಗಾಗಲೇ ರಸ್ತೆ ಬದಿ, ಕಾಲೇಜು ಆವರಣ ಹಾಗೂ ಬೇಡಿಕೆಯಿರುವಲ್ಲಿ ಮೂರು ಸಾವಿರದಷ್ಟು ಗಿಡಗಳನ್ನು ನೆಡಲಾಗಿದೆ. ಸೋಮೇಶ್ವರ ಕಡಲ ಕಿನಾರೆಯಲ್ಲಿ ನೂರು ಗಿಡಗಳನ್ನು ನೆಡಲು ಯೋಚಿಸಲಾಗಿತ್ತಾದರೂ ಜಾಗ ಇಲ್ಲದ ಕಾರಣ 50 ಗಿಡಗಳನ್ನು ನೀಡಲಾಗಿದೆ. ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ ಸೋಮೇಶ್ವರ ಸಮುದ್ರ ಕಿನಾರೆಯಲ್ಲೇ ದೇವಸ್ಥಾನವೂ ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ವಿಫುಲ ಅವಕಾಶ ಇದೆ. ಹಸಿರೀಕರಣದಿಂದಲೂ ಪ್ರವಾಸಿಗರನ್ನು ಸೆಳೆಯಬಹುದು. ಗಾಳಿಮರ ಕಡಿದಿದ್ದು ಬೇಸರ ತಂದಿತ್ತು. ಆದರೆ ನಮ್ಮ ಮನವಿಗೆ ಸ್ಪಂದಿಸಿದ ಇಲಾಖೆ ಮತ್ತೆ ಗುಣಮಟ್ಟದ ಗಿಡಗಳನ್ನು ನೆಟ್ಟಿರುವುದು ಖುಷಿ ಕೊಟ್ಟಿದೆ. ದಿನೇಶ್ ನಡಾರ್, ಪರಿಸರ ಪ್ರೇಮಿ