ಜಿಲ್ಲೆ

ಕೆ.ಸಿ.ವ್ಯಾಲಿ ಕಾಲುವೆಯಲ್ಲಿ ಗಿಡ-ಗಂಟಿ


ಮಳೆ ಬಂದರೆ ರೈತರ ತೋಟಗಳಿಗೆ ನುಗ್ಗುವ ನೀರು - ಅಕ್ಕಪಕ್ಕದ ಕೃಷಿಕರಿಗೆ ಸಂಕಷ್ಟ

ಕೋಲಾರ: ಜಿಲ್ಲೆಯಲ್ಲಿ ಕೆರೆಯಿಂದ ಕೆರೆಗೆ ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರಿನ ಕಾಲುವೆಗಳಲ್ಲಿ ಹುಲ್ಲು ಮತ್ತು ಗಿಡ&ಗಂಟಿಗಳು ಬೆಳೆದು ತ್ಯಾಜ್ಯ ತುಂಬಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರೈತರ ತೋಟಗಳಿಗೆ ನುಗ್ಗುತ್ತಿದ್ದು, ಬೆಳಗಳು ಹಾಳಾಗುತ್ತಿವೆ.
ಒಂದನೇ ಹಂತದಲ್ಲಿ ಸುಮಾರು 136 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದ್ದು, ಕೆಲವೊಂದು ಕೆರೆಗಳಿಗೆ ಕಾಲುವೆ ಮೂಲಕವೇ ನೀರು ಹರಿಯುತ್ತಿರುವುದರಿಂದ ಕಾಲುವೆಯ ಅಕ್ಕಪಕ್ಕದಲ್ಲಿ ಹುಲ್ಲು ಮತ್ತು ಗಿಡ&ಗಂಟಿಗಳು ಬೆಳೆದಿರುವುದರಿಂದ ಅಲ್ಲಲ್ಲಿ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯಲು ಅವಕಾಶ ಇಲ್ಲದಂತಾಗಿದೆ. ಈಗ ಮಳೆಗಾಲ ಆಗಿರುವುದರಿಂದ ಮಳೆ ನೀರು ಕಾಲುವೆಗೆ ಸೇರಿಕೊಂಡು ಕಾಲುವೆಗಳ ತುಂಬಾ ಹರಿಯತೊಡಗಿದ್ದು, ಹರಿವಿನ ಪ್ರಮಾಣ ಹೆಚ್ಚಾದಂತೆ ರೈತರ ಹೊಲ, ಗದ್ದೆಗಳಿಗೆ ಮತ್ತು ತೋಟಗಳಿಗೆ ನುಗ್ಗುತ್ತಿವೆ. ನೀರು ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕೋಲಾರ ತಾಲೂಕಿನ ಕೆಂದಟ್ಟಿಯಿಂದ ಚುಂಚದೇನಹಳ್ಳಿ, ಚೆಲುವನಹಳ್ಳಿ ಕೆರೆಗಳಿಗೆ ಹೋಗುವ ಕೆ.ಸಿ.ವ್ಯಾಲಿ ಕಾಲುವೆಗಳು ಚಿಕ್ಕದಾಗಿದ್ದು, ಮಳೆ ಬಂದಾಗ ಕಾಲುವೆ ಮತ್ತು ಮಳೆ ನೀರು ತೋಟಗಳಿಗೆ ನುಗ್ಗುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


"ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ಬರುತ್ತಿರುವ ಕಾಲುವೆಗಳಲ್ಲಿ ಹುಲ್ಲು ಮತ್ತು ಗಿಡಗಂಟಿಗಳು ಬೆಳೆದಿರುವುದರಿಂದ ಅಲ್ಲಲ್ಲಿ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದೆ. ಈ ಮಧ್ಯೆ ಮಳೆ ಬರುತ್ತಿದ್ದು, ಮಳೆ ನೀರು ಕಾಲುವೆಗಳಲ್ಲಿ ಸೇರಿಕೊಂಡು ಹರಿವಿನ ಪ್ರಮಾಣ ಹೆಚ್ಚಾಗಿ, ತೋಟಗಳಿಗೆ ಮತ್ತು ಹೊಲಗಳಿಗೆ ನುಗ್ಗಿತ್ತಿದೆ. ಮಳೆ ಕೊರತೆ, ವೈರಸ್​ ಕಾಟ ಇತ್ಯಾದಿಗಳಿಂದ ರೈತ ಇಟ್ಟ ಬೆಳೆಗೆ ಬೆಲೆ ಬಾರದೆ ನಷ್ಟ ಅನುಭವಿಸುವ ಸಂದರ್ಭದಲ್ಲಿ ನೀರು ನುಗ್ಗಿ ಬೆಳೆ ನಾಶವಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಕಾಲುವೆ ಸ್ವಚ್ಛಗೊಳಿಸಬೇಕು. "

-ಎಚ್​.ಸೊಣ್ಣಪ್ಪ, ರೈತ, ಅರಾಭಿಕೊತ್ತನೂರು


"ಕೆ.ಸಿ.ವ್ಯಾಲಿ ನೀರು ಕೆರೆಯಿಂದ ಕೆರೆಗೆ ಕಾಲುವೆಗಳ ಮೂಲಕವೇ ಹರಿಯುತ್ತಿದೆ. ಕಾಲುವೆ ಅಕ್ಕಪಕ್ಕದಲ್ಲಿ ತೇವಾಂಶ ಇರುವುದರಿಂದ ಹುಲ್ಲು ಮತ್ತು ಗಿಡಗಂಟೆಗಳು ಬೆಳೆಯುತ್ತವೆ. ಆಗಾಗ ಸ್ವಚ್ಛಗೊಳಿಸಬೇಕು. ಸ್ವಚ್ಛತೆಗೆ ನಮ್ಮಲ್ಲಿ ಅನುದಾನದ ಕೊರತೆಯಿದೆ. ಸಣ್ಣ ನೀರಾವರಿ ಇಲಾಖೆಯು ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಚುಂಚದೇನಹಳ್ಳಿ ಕೆರೆಯಿಂದ ಚೆಲುವನಹಳ್ಳಿ ಕೆರೆಗೆ ಹೋಗುವ ಕಾಲುವೆ ಸ್ವಚ್ಛತೆಗೆ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗುವುದು. "

- ಕೃಷ್ಣ, ಕೆ.ಸಿ.ವ್ಯಾಲಿ ಇಂಜಿನಿಯರ್​

ಬೇಸಿಗೆ ಒಳಗೆ ಸ್ವಚ್ಛಗೊಳಿಸಲಿ
ಮಳೆ ಬಂದಾಗ ಮತ್ತಷ್ಟು ನೀರು ಸೇರಿದರೆ ಹರಿವಿನ ಪ್ರಮಾಣ ಹೆಚ್ಚಾಗಿ ಆ ನೀರು ಹೊಲ, ಗದ್ದೆ ಮತ್ತು ತೋಟಗಳಿಗೆ ನುಗ್ಗುತ್ತಿವೆ. ಕೆ.ಸಿ.ವ್ಯಾಲಿ ನೀರು ಹರಿಯುವ ಎಲ್ಲ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕಾಗಿದೆ. ಸ್ವಚ್ಛಗೊಳಿಸುವುದರಿಂದ ನೀರು ವ್ಯರ್ಥವಾಗದೆ ಕೆರೆಗಳಿಗೆ ಸೇರುತ್ತವೆ. ಕೆರೆಗಳು ಬೇಗ ತುಂಬುತ್ತವೆ ಎಂಬುದು ರೈತರ ಅಭಿಪ್ರಾಯವಾಗಿದೆ. ಸಣ್ಣ ಇಲಾಖೆಯವರಾಗಲೀ ಅಥವಾ ಕೆ.ಸಿ.ವ್ಯಾಲಿ ಯೋಜನೆಯವರಾಗಲೀ ಈ ಕಾಲುವೆಗಳನ್ನು ಬೇಸಿಗೆಯೊಳಗಾಗಿ ಸ್ವಚ್ಛಗೊಳಿಸಬೇಕಾಗಿದೆ ಎಂದು ರೈತರು ಆಗ್ರಹಿಸಿದ್ದಾರೆ.